ಆಪರೇಷನ್ ಬ್ಲೂಸ್ಟಾರ್ 40ನೇ ವಾರ್ಷಿಕ ದಿನ : ಕೆನಡಾದಲ್ಲಿನ ಭಾರತದ ದೂತಾವಾಸಗಳ `ಲಾಕ್ಡೌನ್'ಗೆ ಎಸ್ಎಫ್ಜೆ ಆಗ್ರಹ
Photo : freepik
ಟೊರಂಟೊ: `ಆಪರೇಷನ್ ಬ್ಲೂಸ್ಟಾರ್'ನ 40ನೇ ವಾರ್ಷಿಕ ದಿನ ಸಮೀಪಿಸುತ್ತಿರುವಂತೆಯೇ, ಕೆನಡಾದಲ್ಲಿನ ಭಾರತದ ದೂತಾವಾಸ ಕಚೇರಿಗಳ ಲಾಕ್ಡೌನ್ಗೆ ಪ್ರತ್ಯೇಕತಾವಾದಿಗಳ ಗುಂಪು `ಸಿಖ್ಸ್ ಫಾರ್ ಜಸ್ಟಿಸ್' ಆಗ್ರಹಿಸಿದೆ.
`ಬ್ಲೂಸ್ಟಾರ್ ಕಾರ್ಯಾಚರಣೆ'ಗೆ ಸಿಖ್ ಹತ್ಯಾಕಾಂಡವೆಂದು ಅಧಿಕೃತ ಮಾನ್ಯತೆಯನ್ನು ಈ ವರ್ಷದ ನವೆಂಬರ್ನಲ್ಲಿ ಕೋರಲಾಗುವುದು ಎಂದು ನ್ಯೂ ಡೆಮೊಕ್ರಟಿಕ್ ಪಾರ್ಟಿ ಅಥವಾ ಎನ್ಡಿಪಿ ಘೋಷಿಸಿದೆ.
ಪಂಜಾಬ್ನ ಅಮೃತಸರದಲ್ಲಿರುವ ಸ್ವರ್ಣ ಮಂದಿರದಲ್ಲಿದ್ದ ಖಾಲಿಸ್ತಾನ್ ಉಗ್ರವಾದಿಗಳ ವಿರುದ್ಧ ಭಾರತದ ಸೇನೆ 1984ರ ಜೂನ್ 6ರಂದು ಆಪರೇಷನ್ ಬ್ಲೂಸ್ಟಾರ್ ಎಂಬ ಸಂಕೇತ ನಾಮದ ಕಾರ್ಯಾಚರಣೆ ನಡೆಸಲಾಗಿತ್ತು. ಕೆನಡಾದಲ್ಲಿ ಇತ್ತೀಚಿನ ದಿನಗಳಲ್ಲಿ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಭಾರತ ವಿರೋಧಿ ಚಟುವಟಿಕೆ ಹೆಚ್ಚಿದೆ.
ಜೂನ್ 6ರಂದು ಭಾರತದ ದೂತಾವಾಸದ ಎದುರು ಪಿಕೆಟಿಂಗ್ ನಡೆಸುವುದಾಗಿಯೂ ಎಸ್ಎಫ್ಜೆ `ನೋಟಿಸ್' ನೀಡಿರುವುದಾಗಿ ವರದಿಯಾಗಿದೆ. ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ದಿಲ್ಲಿಯಲ್ಲಿ ನಡೆದಿದ್ದ ಸಿಖ್ ವಿರೋಧಿ ಗಲಭೆಯನ್ನು `ಸಿಖ್ ಹತ್ಯಾಕಾಂಡ'ವೆಂದು ಅಧಿಕೃತವಾಗಿ ಮಾನ್ಯ ಮಾಡುವಂತೆ ಕೆನಡಾ ಸಂಸತ್ನಲ್ಲಿ ನಿರ್ಣಯ ಮಂಡಿಸುವುದಾಗಿ ಎನ್ಡಿಪಿ ಪಕ್ಷ ಹೇಳಿದೆ. `1984ರ ಸಿಖ್ ಹತ್ಯಾಕಾಂಡಕ್ಕೆ ಹೊಣೆಗಾರರನ್ನು ಗುರುತಿಸಿ ನ್ಯಾಯ ಒದಗಿಸುವುದು' ನಮ್ಮ ಉದ್ದೇಶವಾಗಿದೆ ಎಂದು ಎನ್ಡಿಪಿ ಪ್ರತಿಪಾದಿಸಿದೆ.