ಗಾಝಾ ಕದನ ವಿರಾಮ ಬೆಂಬಲಿಸಿ ಕೆಂಪು ಪಿನ್ ಧರಿಸಿದ್ದ ಹಾಲಿವುಡ್ ತಾರೆಯರಾದ ಬಿಲ್ಲಿ ಐಲಿಶ್, ಮಾರ್ಕ್ ರಫೆಲೊ ಗೆ ಶ್ಲಾಘನೆ
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2024
Photo:instagram.com/markruffalo/
ಲಾಸ್ ಏಂಜಲೀಸ್: 2024 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘Artists4Ceasefire’ ಚಳವಳಿಯ ಭಾಗವಾಗಿ ಹಲವಾರು ತಾರೆಯರು ತಮ್ಮ ಕೋಟುಗಳ ಮೇಲೆ ಕೆಂಪು ಪಿನ್ ಧರಿಸಿದ್ದರು. ಫೆಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು, ಗಾಝಾದಲ್ಲಿ ಶಾಶ್ವತ ಕದನ ವಿರಾಮಕ್ಕಾಗಿ ಆಗ್ರಹಿಸುವ ಭಾಗವಾಗಿ ಆ ಕೆಂಪು ಪಿನ್ ತಮ್ಮ ಕೋಟುಗಳ ಮೇಲೆ ಧರಿಸಿದ್ದರು ಎನ್ನಲಾಗಿದೆ.
ಈ ಬಾರಿ ಆಸ್ಕರ್ಸ್ ಕೆಂಪು ಹಾಸಿನ ಮೇಲೆ ಹಾಲಿವುಡ್ ತಾರೆಯರು ಎಂದಿನಂತೆ ಕೇವಲ ವಸ್ತ್ರವಿನ್ಯಾಸ ಕುರಿತ ಹೇಳಿಕೆಗಳನ್ನು ಮಾತ್ರ ನೀಡಲಿಲ್ಲ. ಬದಲಿಗೆ ಮುಕ್ತವಾಗಿ ಬದಲಾದ ರಾಜಕೀಯ ಕುರಿತ ಹೇಳಿಕೆಗಳನ್ನೂ ನೀಡಿದರು. ತಮ್ಮ ಕೋಟಿನ ಮೇಲೆ ಕೆಂಪು ಪಿನ್ ಧರಿಸಿದ್ದವರ ಪೈಕಿ ಆಸ್ಕರ್ ವಿಜೇತ ನಟಿ ಬಿಲ್ಲಿ ಐಲಿಶ್ ಕೂಡಾ ಸೇರಿದ್ದರು.
ನಟಿ ಬಿಲ್ಲಿ ಐಲಿಶ್ ತಲೆಯಿಂದ ಕಾಲ ಬೆರಳವರೆಗೆ ಧರಿಸಿದ್ದ ಎಲ್ಲ ವಸ್ತ್ರಗಳೂ ಸಾಂಕೇತಿಕವಾಗಿದ್ದವು. ಅವರ ಕಾಳಜಿಯ ಪರವಾಗಿ ನಿಂತವರು ಆಕೆಯ ಸಹೋದರ ಫಿನ್ನಿಯಸ್. ಅವರಿಬ್ಬರೂ ಬಾರ್ಬಿ ಚಿತ್ರದ ‘ವಾಟ್ ಐ ವಾಸ್ ಮೇಡ್ ಫಾರ್’ ಗೀತೆಗೆ ಸಂಯೋಜಿಸಿರುವ ಸಂಗೀತಕ್ಕಾಗಿ ಅತ್ಯುತ್ತಮ ಮೂಲಗೀತೆ ಪ್ರಶಸ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದರು. ಇದಕ್ಕೂ ಮುನ್ನ ಈ ಚೈತನ್ಯಶಾಲಿ ಜೋಡಿಗಳು ಎರಡು ಬಾರಿ ಆಸ್ಕರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಕದನ ವಿರಾಮ ಬೆಂಬಲಿಸುವುದರಲ್ಲಿ ಕೈಜೋಡಿಸಿದ ಮತ್ತೊಬ್ಬರು ಈಜಿಪ್ಟ್-ಅಮೆರಿಕಾ ನಟ ರ್ಯಾಮಿ ಯೂಸೆಫ್. ಅವರು ‘ಪುವರ್ ಥಿಂಗ್ಸ್’ ಚಿತ್ರದಲ್ಲಿನ ತಮ್ಮ ಪಾತ್ರದಿಂದ ಮನೆಮಾತಾಗಿದ್ದಾರೆ. ಅವರು ಕೆಂಪು ಹಾಸಿನ ಮೇಲೆ ತಾವು ಧರಿಸಿದ್ದ ಕೆಂಪು ಪಿನ್ ನ ಹಿಂದೆ, “ನಾವು ಕೆಲವು ನಟರು ಕದನ ವಿರಾಮ ಬೆಂಬಲಿಸಲು ಪಿನ್ ಧರಿಸಿದ್ದೇವೆ. ನಾವು ಗಾಝಾದಲ್ಲಿ ತಕ್ಷಣ ಮತ್ತು ಶಾಶ್ವತ ಕದನ ವಿರಾಮಕ್ಕಾಗಿ ಆಗ್ರಹಿಸುತ್ತೇವೆ” ಎಂಬ ಸಂದೇಶವನ್ನು ಪ್ರದರ್ಶಿಸಿದರು.
ಈ ಅಭಿಯಾನಕ್ಕೆ ಕೈಜೋಡಿಸಿದ ಪ್ರಖ್ಯಾತ ತಾರೆಯರ ಪೈಕಿ ಯುಗೀನ್ ಲೀ ಯಾಂಗ್, ಕ್ವಾನ್ನಾ ಚಾಸಿಂಗ್ ಹಾರ್ಸ್, ಅವಾ ಡುವೆರ್ನೆ, ಸ್ವಾನ್ ಅರ್ಲೌಡ್ ಹಾಗೂ ಮಿಲೊ ಮಚಾಡೊ - ಗ್ರಾನರ್ ಸೇರಿದ್ದು, ಅವರೆಲ್ಲ ಹೆಮ್ಮೆಯಿಂದ ಫೆಲೆಸ್ತೀನ್ ಧ್ವಜದೊಂದಿಗೆ ಕೆಂಪು ಪಿನ್ ಧರಿಸಿದ್ದರು.
ಗಾಝಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ಕುರಿತು ವಕಾಲತ್ತು ವಹಿಸಿರುವ ಮಾರ್ಕ್ ರಫೆಲೊ ಈ ಅಭಿಯಾನದ ಮುಂದಾಳಾಗಿ ಹಲವಾರು ದಿನಗಳಿಂದ ಮುಂದುವರಿದಿದ್ದಾರೆ.
ಮಾರ್ಕ್ ರಫೆಲೊ, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಹೃದಯಸ್ಪರ್ಶಿ ಟಿಪ್ಪಣಿ ಬರೆದುಕೊಂಡಿದ್ದಾರೆ. “ಇಂದು ರಾತ್ರಿ ಆಸ್ಕರ್ ಸಮಾರಂಭದಲ್ಲಿ ನಾನು @myvoicemychoiceorg ನ ಮಹಿಳೆಯರೊಂದಿಗೆ ನಿಲ್ಲುತ್ತೇನೆ. ಅವರು ಈ ಬೆರಳು ಗಾತ್ರದ ಹೃದಯವನ್ನು ಆಯ್ಕೆಯ ಹಕ್ಕಿಗೆ ಬಳಸುತ್ತಿದ್ದಾರೆ. ಸಂತಾನೋತ್ಪತ್ತಿಯ ಹಕ್ಕು ವಿಷಯವು ನನಗೆ ‘ಪುವರ್ ಥಿಂಗ್ಸ್’ ಚಿತ್ರವನ್ನು ನೆನಪಿಸುತ್ತದೆ. ಆ ಚಿತ್ರದ ಒಂದು ಮಾತನ್ನು ಇಲ್ಲಿ ಉಲ್ಲೇಖಿಸುತ್ತೇನೆ. “ಬೆಲ್ಲಾ ಬಾಕ್ಸ್ಟರ್, ಇದು ನಿಮ್ಮ ದೇಹ. ನೀವದನ್ನು ಮುಕ್ತವಾಗಿ ನೀಡಬೇಕು”. ಆದರೆ, ತೀವ್ರ ಬಲಪಂಥೀಯರು ಈ ಶಕ್ತಿಶಾಲಿ ಸಂದೇಶವನ್ನು ವಿರೋಧಿಸುತ್ತಾರೆ. ಅಮೆರಿಕಾ ಮತ್ತು ಯೂರೋಪ್ ಒಕ್ಕೂಟದಲ್ಲೇ ಲಕ್ಷಾಂತರ ಮಹಿಳೆಯರು ಅತ್ಯಗತ್ಯವಾದ ಸಂದರ್ಭಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದರಿಂದ ತಡೆ ಹಿಡಿಯಲಾಗಿದೆ” ಎಂದು ಬರೆದುಕೊಂಡಿದ್ದಾರೆ.
“ಹೀಗಾಗಿ, ಯೂರೋಪ್ ನ ಮಹಿಳೆಯರು ಮತಪೆಟ್ಟಿಗೆಯಲ್ಲಿ ಮಹಿಳೆಯರ ಹಕ್ಕಿನ ಪರ ತಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತಿರುವುದು ಸ್ಫೂರ್ತಿದಾಯಕವಾಗಿದೆ. ಈ ಸಂಕೇತವು ಎರಡು ಬೆರಳುಗಳಂತೆಯೆ ಸುಂದರ ಸ್ಮರಣೆಯಾಗಿದೆ. ನಾವು ಎಲ್ಲ ವಿಭಜನೆಯ ನಡುವೆಯೂ ಒಗ್ಗಟ್ಟಾದಾಗ, ಮಾನವೀಯ ಹೃದಯ ಬಡಿತದ ಕೇಂದ್ರವಾಗುತ್ತೇವೆ. ಮತದಾನ ಮಾಡುವುದು ಜೀವದ ನೆತ್ತರಾಗಿದ್ದು, ಆ ಹೃದಯವನ್ನು ಬಲಿಷ್ಠವಾಗಿರಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತರಾದ ಮಹೆರಶಾಲಾ ಅಲಿ ಮತ್ತು ರಿಝ್ ಅಹ್ಮದ್ ಕೂಡಾ ಕೆಂಪು ಪಿನ್ ಧರಿಸಿರುವುದು ಕಂಡು ಬಂದಿತು.
ಕಳೆದ ಹಲವಾರು ತಿಂಗಳಿನಿಂದ ಹಲವು ನಟರು ಈ ಪಿನ್ ಧರಿಸಿ, ಶಾಂತಿಗಾಗಿ ವಕಾಲತ್ತು ವಹಿಸಿದ್ದಾರೆ. ಈ ಬೆಂಬಲದ ಪ್ರದರ್ಶನವು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ಮುಂದುವರಿದಿದ್ದು, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದ ಹಲವಾರು ತಾರೆಯರು ಈ ಪಿನ್ ಅನ್ನು ತಮ್ಮ ಔತಣ ಕೂಟದ ಜಾಕೆಟ್ ಗಳ ಮೇಲೆ ಧರಿಸಿ ಆಗಮಿಸಿದ್ದರು.