ಹಿಜ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ಮಾಡಿದರೆ ನಮ್ಮ ಮಿಲಿಟರಿ ಮಧ್ಯಪ್ರವೇಶಿಸುತ್ತದೆ: ಅಮೆರಿಕ ಎಚ್ಚರಿಕೆ
Photo- PTI
ವಾಷಿಂಗ್ಟನ್: ಇಸ್ರೇಲ್ನ ವಿರುದ್ಧ ಆಕ್ರಮಣ ನಡೆಸಿದರೆ ನಮ್ಮ ಸಶಸ್ತ್ರ ಪಡೆ ಮಧ್ಯಪ್ರವೇಶಿಸಲು ಸಿದ್ಧವಾಗಿದೆ ಎಂದು ಅಮೆರಿಕವು ಇರಾನ್ ಮತ್ತು ಹಿಜ್ಬುಲ್ಲಾಗೆ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
`ನಾವು ಅಮೆರಿಕದ ಸಮರನೌಕೆಗಳಿಗೆ ಹೆದರುವುದಿಲ್ಲ. ಹಿಜ್ಬುಲ್ಲಾ ಪಡೆ ಯಾವುದಕ್ಕೂ ಸಿದ್ಧವಿದೆ. ಗಾಝಾದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಅಮೆರಿಕ ಸಂಪೂರ್ಣ ಜವಾಬ್ದಾರನಾಗಿದೆ ಮತ್ತು ಅಮೆರಿಕದ ಯೋಜನೆಯನ್ನು ಕಾರ್ಯಗತಗೊಳಿಸಲು ಇಸ್ರೇಲ್ ಒಂದು ಸಾಧನವಾಗಿದೆ' ಎಂದು ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ `ಗಾಝಾ ಯುದ್ಧ ನೆರೆಹೊರೆಯ ದೇಶಗಳಿಗೆ ವಿಸ್ತರಿಸದಂತೆ ಅಮೆರಿಕ ಪ್ರಯತ್ನ ನಡೆಸಲಿದೆ. ಆದರೆ ಹಿಜ್ಬುಲ್ಲಾ ಕಾಲುಕೆದರಿ ಜಗಳಕ್ಕೆ ಬಂದರೆ ಅವರಿಗೆ ಸೂಕ್ತ ಪಾಠ ಕಲಿಸುತ್ತೇವೆ' ಎಂದಿದೆ.
ಹಿಜ್ಬುಲ್ಲಾ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಮಿಲಿಟರಿ ಮುಖ್ಯಸ್ಥ ಹೆರ್ಝೆಯ್ ಹಲೆವಿ `ಗಡಿಯಲ್ಲಿ ಭದ್ರತಾ ಪರಿಸ್ಥಿತಿ ಮರುಸ್ಥಾಪಿಸುವುದು ನಮ್ಮ ಆದ್ಯತೆಯಾಗಿದೆ. ಗಾಝಾದಲ್ಲಿ ಅಷ್ಟೇ ಅಲ್ಲ, ಉತ್ತರದ ಗಡಿ(ಲೆಬನಾನ್ ಗಡಿ)ಯಲ್ಲೂ ಯಾವುದೇ ದಾಳಿ ಎದುರಿಸಲು ನಮ್ಮ ಪಡೆ ಸನ್ನದ್ಧವಾಗಿದೆ' ಎಂದಿದ್ದಾರೆ.