ಪಪುವಾ ನ್ಯೂಗಿನಿಯದಲ್ಲಿ ಭೂ ಕುಸಿತ: 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ
Image Credit: X/@BNONews
ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಲ್ಲಿ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಸಂಭವಿಸಿರುವ ಭೂ ಕುಸಿತದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಎಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಪುವಾ ನ್ಯೂಗಿನಿಯ ರಾಜಧಾನಿಯಾದ ಪೋರ್ಟ್ ಮೋರೆಸ್ಬಿಯ ವಾಯುವ್ಯ ದಿಕ್ಕಿನಿಂದ ಸುಮಾರು 600 ಕಿಮೀ ದೂರದಲ್ಲಿರುವ ಎಂಗಾ ಪ್ರಾಂತ್ಯದ ಕೌಕಲಮ್ ಗ್ರಾಮದಲ್ಲಿ ಮುಂಜಾನೆ ಸುಮಾರು 3 ಗಂಟೆಗೆ ಈ ಭೂ ಕುಸಿತ ಸಂಭವಿಸಿದೆ.
ಸ್ಥಳೀಯರ ಪ್ರಕಾರ, ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ, ಸರಕಾರಿ ಪ್ರಾಧಿಕಾರಗಳು ಈವರೆಗೆ ಯಾವುದೇ ಅಂಕಿ-ಸಂಖ್ಯೆಯನ್ನು ದೃಢಪಡಿಸಿಲ್ಲ. ಹೀಗಿದ್ದೂ, 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದೂ ಸ್ಥಳೀಯರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ, ಜನರು ಬೃಹತ್ ಗಾತ್ರದ ಬಂಡೆಗಳನ್ನೇರಿ, ಅವಶೇಷಗಳಡಿಯಿಂದ ಹಾಗೂ ಮರಗಳ ಅಡಿಯಿಂದ ಮೃತದೇಹಗಳನ್ನು ಹೊರಗೆಳೆಯುತ್ತಿರುವುದು ಕಂಡು ಬಂದಿದೆ.
ಬೆಟ್ಟದ ಒಂದು ಬದಿ ಕುಸಿದಿದ್ದರಿಂದ ಮನೆಗಳು ಹಾನಿಗೊಂಡಿವೆ ಎಂದು ಪೋರ್ಗೆರಾ ವುಮೆನ್ ಇನ್ ಬಿಸಿನೆಸ್ ಅಸೋಸಿಯೇಷನ್ ಅಧ್ಯ ಕ್ಷೆ ಎಲಿಝಬೆತ್ ಲರುಮ ಹೇಳಿದ್ದಾರೆ ಎಂದು ಎಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ, ಪಪುವಾ ನ್ಯೂ ಗಿನಿಯದ ಸರಕಾರಿ ಅಧಿಕಾರಿಗಳು ಭೂ ಕುಸಿತದ ಕುರಿತು ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.