ಮ್ಯಾನ್ಮಾರ್, ಥಾಯ್ಲೆಂಡ್ನಲ್ಲಿ ಭೂಕಂಪಕ್ಕೆ ಮೃತರ ಸಂಖ್ಯೆ 700ಕ್ಕೆ ಏರಿಕೆ

Credit: Reuters Photo
ಬ್ಯಾಂಕಾಕ್: ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 1,670ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಮಧ್ಯಾಹ್ನ ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ಬಳಿಕ ಶುಕ್ರವಾರ ರಾತ್ರಿ 11.56ಕ್ಕೆ ಮತ್ತೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಲ್ಲಿ ಮೃತರ ಸಂಖ್ಯೆ 694ಕ್ಕೆ ಏರಿಕೆಯಾಗಿದೆ ಎಂದು ಮ್ಯಾನ್ಮಾರ್ ಮಿಲಿಟರಿ ಸೋಮವಾರ ಬೆಳಿಗ್ಗೆ ಮಾಹಿತಿಯನ್ನು ನೀಡಿದೆ. ಬ್ಯಾಂಕಾಕ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. 117ಕ್ಕೂ ಅಧಿಕ ಕಟ್ಟಡ ಅವಶೇಗಳಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ಈಗಾಗಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಮ್ಯಾನ್ಮಾರ್ ಸರಕಾರ 6 ವಲಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಭೂಕಂಪದ ಬೆನ್ನಲ್ಲೇ ಮ್ಯಾನ್ಮಾರ್ ಅಂತಾರಾಷ್ಟ್ರೀಯ ನೆರವನ್ನು ಕೋರಿದೆ. ಭಾರತ, ಜಪಾನ್, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳು ಭೂಕಂಪ ಪೀಡಿತ ದೇಶಕ್ಕೆ ನೆರವು ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್ ʼ ಭಾರತೀಯ ವಾಯುಪಡೆಯ IAF C-130J ವಿಮಾನದಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿ ಟೆಂಟ್ಗಳು, ಚೀಲಗಳು, ಕಂಬಳಿಗಳು, ಆಹಾರ ಪದಾರ್ಥಗಳು, ನೀರಿನ ಬಾಟಲ್ ಗಳು, ನೈರ್ಮಲ್ಯ ಕಿಟ್ಗಳು, ಸೌರ ದೀಪಗಳು, ಜನರೇಟರ್ ಸೆಟ್ಗಳು, ಮಾತ್ರೆಗಳು, ಪ್ರತಿಜೀವಕ ಔಷಧಿಗಳು, ಸಿರಿಂಜ್ಗಳು, ಕೈಗವಸುಗಳು, ಹತ್ತಿ ಬ್ಯಾಂಡೇಜ್ಗಳು, ಮೂತ್ರ ಚೀಲಗಳಂತಹ ಅಗತ್ಯ ಔಷಧ ಸಾಮಗ್ರಿಗಳನ್ನು ಒಳಗೊಂಡಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಭೂಕಂಪ ಪೀಡಿತ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.