ಭಾರತಕ್ಕೆ 500 ವರ್ಷದ ಹಿಂದಿನ ಕಂಚಿನ ವಿಗ್ರಹ ಹಿಂದಿರುಗಿಸಲು ಆಕ್ಸ್ಫರ್ಡ್ ವಿವಿ ಸಮ್ಮತಿ
(Photo: X/@FXMC1957)
ಲಂಡನ್: ತಮಿಳುನಾಡಿನ ದೇವಾಲಯದಿಂದ ಕಳವಾಗಿದ್ದ ಸಂತ ತಿರುಮಂಕೈ ಆಳ್ವಾರ್ ಅವರ 500 ವರ್ಷದ ಹಿಂದಿನ ಕಂಚಿನ ವಿಗ್ರಹವನ್ನು ಭಾರತಕ್ಕೆ ಹಿಂದಿರುಗಿಸಲು ಆಕ್ಸ್ಫರ್ಡ್ ವಿವಿ ಸಮ್ಮತಿಸಿರುವುದಾಗಿ ವರದಿಯಾಗಿದೆ.
ಆಶ್ಮೊಲಿಯನ್ ಮ್ಯೂಸಿಯಂನಲ್ಲಿರುವ ಸಂತ ತಿರುಮಂಕೈ ಆಳ್ವಾರ್ ಅವರ 16ನೇ ಶತಮಾನದ ಕಂಚಿನ ವಿಗ್ರಹವನ್ನು ಭಾರತಕ್ಕೆ ಮರಳಿಸಬೇಕೆಂಬ ಭಾರತದ ಹೈಕಮಿಷನ್ನ ಕೋರಿಕೆಯನ್ನು ಆಕ್ಸ್ಫರ್ಡ್ ವಿವಿಯ ಸಮಿತಿ ಬೆಂಬಲಿಸಿದ್ದು ಈ ನಿರ್ಧಾರವನ್ನು ಅನುಮೋದನೆಗಾಗಿ ಚಾರಿಟಿ ಕಮಿಷನ್ಗೆ ರವಾನಿಸಲಾಗಿದೆ ಎಂದು ವಿವಿ ಆಡಳಿತ ಸಮಿತಿ ಹೇಳಿದೆ.
ಡಾ.ಜೆ.ಆರ್. ಬೆಲ್ಮೋಂಟ್ ಎಂಬವರ ಸಂಗ್ರಹದಲ್ಲಿದ್ದ 60 ಸೆ.ಮೀ ಎತ್ತರದ ಆಳ್ವಾರ್ ಪ್ರತಿಮೆಯನ್ನು ಆಕ್ಸ್ಫರ್ಡ್ ವಿವಿಯ ಆಶ್ಮೊಲಿಯನ್ ಮ್ಯೂಸಿಯಂ 1967ರಲ್ಲಿ ಏಲಂನಲ್ಲಿ ಪಡೆದುಕೊಂಡಿತ್ತು. ನವೆಂಬರ್ನಲ್ಲಿ ಖಾಸಗಿ ಸಂಶೋಧಕರೊಬ್ಬರು ಪ್ರತಿಮೆಯ ಮೂಲದ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭಾರತದ ಹೈಕಮಿಷನ್ಗೆ ಈ ವಿಷಯವನ್ನು ತಿಳಿಸಲಾಗಿದೆ. ಬಳಿಕ, ತಮಿಳುನಾಡಿನ ದೇವಾಲಯವೊಂದರಿಂದ ಕಳವಾಗಿದ್ದ ಈ ಪ್ರತಿಮೆಯನ್ನು ಮರಳಿಸುವಂತೆ ಭಾರತ ಸರಕಾರ ಔಪಚಾರಿಕ ಕೋರಿಕೆ ಸಲ್ಲಿಸಿದೆ ಎಂದು ವರದಿ ಹೇಳಿದೆ.