ಪೇಜರ್ ಸ್ಫೋಟ ಘಟನೆ | ಇಸ್ರೇಲ್ ವಿರುದ್ಧ ದೂರು ದಾಖಲು
PC : X
ಜಿನೆವಾ : ಸೆಪ್ಟಂಬರ್ ನಲ್ಲಿ ನಡೆದ ಪೇಜರ್ ಸ್ಫೋಟ ಘಟನೆಗೆ ಸಂಬಂಧಿಸಿ ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಸಹಸಂಸ್ಥೆ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯಲ್ಲಿ ದೂರು ದಾಖಲಿಸಿರುವುದಾಗಿ ಲೆಬನಾನ್ ನ ಕಾರ್ಮಿಕ ಸಚಿವ ಮುಸ್ತಫಾ ಬಯ್ರಾಮ್ ಬುಧವಾರ ಹೇಳಿದ್ದಾರೆ.
ಸೆಪ್ಟಂಬರ್ ಮಧ್ಯಭಾಗದಲ್ಲಿ ಲೆಬನಾನ್ ನಲ್ಲಿ ಸಂಭವಿಸಿದ ಸರಣಿ ಪೇಜರ್ ಸ್ಫೋಟದಲ್ಲಿ ಇಬ್ಬರು ಮಕ್ಕಳ ಸಹಿತ ಕನಿಷ್ಠ 37 ಮಂದಿ ಮೃತಪಟ್ಟಿದ್ದು 3000 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಆರೋಪಿಸಲಾಗಿದೆ. `ಈ ರೀತಿಯ ಯುದ್ಧದ ವಿಧಾನವು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಪರಿಧಿಯಿಂದ ನುಣುಚಿಕೊಳ್ಳುವ ಅನೇಕರಿಗೆ ಹೊಸ ದಾರಿಯನ್ನು ತೋರಿಸಿ ಕೊಡಬಹುದು. ಇದನ್ನು ಖಂಡಿಸದಿದ್ದರೆ ಅಪಾಯಕಾರಿ ಪೂರ್ವನಿದರ್ಶನ ಹಾಕಿಕೊಟ್ಟಂತಾಗುತ್ತದೆ. ದೈನಂದಿನ ಬಳಕೆಯ ವಸ್ತುಗಳೂ ಅಪಾಯಕಾರಿಯಾಗಬಹುದು ಎಂಬ ಸ್ಥಿತಿಯಲ್ಲಿ ನಾವಿದ್ದೇವೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಮಾವೇಶಗಳು ಕಾರ್ಮಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.