ಪಹಲ್ಗಾಮ್ ಭಯೋತ್ಪಾದಕ ದಾಳಿ: ಭಾರತ, ಪಾಕ್ನಿಂದ ಗರಿಷ್ಠ ಸಂಯಮಕ್ಕೆ ವಿಶ್ವಸಂಸ್ಥೆ ಆಗ್ರಹ
ರಾಜತಾಂತ್ರಿಕ ಬಿಕ್ಕಟ್ಟು ತಪ್ಪಿಸಲು ಕರೆ

PC : PTI
ವಿಶ್ವಸಂಸ್ಥೆ: ಮಾರಣಾಂತಿಕ ಪಹಲ್ಗಾಮ್ ಭಯೋತ್ಪಾದಕ ದಾಳಿ ಘಟನೆಯ ಹಿನ್ನೆಲೆಯಲ್ಲಿ, ಉಪಖಂಡದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಪ್ಪಿಸಲು ಭಾರತ ಮತ್ತು ಪಾಕಿಸ್ತಾನಗಳು ಗರಿಷ್ಠ ಸಂಯಮ ವಹಿಸಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.
`ಗರಿಷ್ಠ ಸಂಯಮ ವಹಿಸುವಂತೆ ಮತ್ತು ಪರಿಸ್ಥಿತಿ ಹಾಗೂ ನಾವು ಗಮನಿಸಿರುವ ಬೆಳವಣಿಗೆಗಳು ಮತ್ತಷ್ಟು ಹದಗೆಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನದ ಸರಕಾರಗಳಿಗೆ ಮನವಿ ಮಾಡುತ್ತೇವೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿಕೆ ನೀಡಿದ್ದು ಎಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಖಂಡನೆಯನ್ನು ಪುನರುಚ್ಚರಿಸಿದ್ದಾರೆ.
`ಭಾರತ ಮತ್ತು ಪಾಕಿಸ್ತಾನ ನಡುವಿನ ಯಾವುದೇ ಸಮಸ್ಯೆಗಳಿಗೆ ಅರ್ಥಪೂರ್ಣವಾದ ಪರಸ್ಪರ ಮಾತುಕತೆಗಳ ಮೂಲಕ ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಮ್ಮ ಸ್ಪಷ್ಟ ನಿಲುವಾಗಿದೆ ಎಂದವರು ಹೇಳಿದ್ದಾರೆ. ನದಿ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಸಿಂಧೂ ನೀರಿನ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡ್ಯುಜರಿಕ್ ` ಗರಿಷ್ಠ ಸಂಯಮ ವಹಿಸುವಂತೆ ಹಾಗೂ ಉದ್ವಿಗ್ನತೆಯನ್ನು ಇನ್ನಷ್ಟು ಬಿಗಡಾಯಿಸುವ ಯಾವುದೇ ಕ್ರಮಕ್ಕೆ ಮುಂದಾಗಬೇಡಿ ಎಂಬ ನಮ್ಮ ಮನವಿಯಲ್ಲಿ ಈ ಪ್ರಶ್ನೆಗೆ ಉತ್ತರವಿದೆ' ಎಂದರು. ಭಯೋತ್ಪಾದಕ ದಾಳಿಯ ಬಳಿಕ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಭಾರತ ಮತ್ತು ಪಾಕಿಸ್ತಾನ ನಾಯಕರನ್ನು ನೇರವಾಗಿ ಸಂಪರ್ಕಿಸಿಲ್ಲ ಎಂದವರು ಇದೇ ಸಂದರ್ಭ ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ, ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ಗುರುವಾರ ರಾತ್ರಿ ಗುಂಡಿನ ಚಕಮಕಿ ನಡೆದಿರುವುದಾಗಿ ವರದಿಯಾಗಿದೆ.