ಪಾಕ್: ಈದ್ ಪ್ರಾರ್ಥನೆ ಸಂದರ್ಭ 17 ಕೈದಿಗಳು ಜೈಲಿಂದ ಪರಾರಿ
ಇಸ್ಲಮಾಬಾದ್, ಜೂ.30: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತದಲ್ಲಿನ ಚಮನ್ ಜೈಲಿನಲ್ಲಿ ಈದ್ಉಲ್-ಅಧಾ ಪ್ರಾರ್ಥನೆಯ ಸಂದರ್ಭ 17 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಈ ಸಂದರ್ಭ ಭದ್ರತಾ ಸಿಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಕೈದಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ಜೈಲಿನೊಳಗಿನ ತೆರೆದ ಬಯಲಿನಲ್ಲಿ ಗುರುವಾರ ಈದ್ ಪ್ರಾರ್ಥನೆಯ ಸಂದರ್ಭ ಈ ಘಟನೆ ನಡೆದಿದೆ. ಕೆಲವು ಕೈದಿಗಳು ಪರಾರಿಯಾಗಲು ಯೋಜನೆ ರೂಪಿಸಿದ್ದು ಈದ್ ಪ್ರಾರ್ಥನೆಯ ಸಂದರ್ಭ ಅದನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದರು. ಈದ್ ಪ್ರಾರ್ಥನೆಗಾಗಿ ಅವರನ್ನು ಹೊರಗೆಬಿಟ್ಟಾಗ ಭದ್ರತಾ ಸಿಬಂದಿಯ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದರು.
ಈ ಸಂದರ್ಭ ಘರ್ಷಣೆ, ಗದ್ದಲ ಉಂಟಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಸಿಬಂದಿ ಹಾರಿಸಿದ ಗುಂಡೇಟಿನಿಂದ ಓರ್ವ ಕೈದಿ ಮೃತಪಟ್ಟಿದ್ದು ಹಲವು ಕೈದಿಗಳು ಗಾಯಗೊಂಡಿದ್ದಾರೆ. ಹಲ್ಲೆಯಿಂದ ಹಲವು ಸಿಬಂದಿಗಳೂ ತೀವ್ರ ಗಾಯಗೊಂಡಿದ್ದು ಈ ಗೊಂದಲದ ನಡುವೆ 17 ಕೈದಿಗಳು ಪರಾರಿಯಾಗಲು ಸಫಲರಾಗಿದ್ದಾರೆ ಎಂದು ಬಲೂಚಿಸ್ತಾನ ಪ್ರಾಂತದ ಬಂದೀಖಾನೆ ವಿಭಾಗದ ಐಜಿಪಿ ಮಲಿಕ್ ಶುಜಾ ಕಾಸಿ ಹೇಳಿದ್ದಾರೆ.
ಕೈದಿಗಳಿಗೆ ಜೈಲಿನ ಹೊರಗಿದ್ದವರ ನೆರವು ಲಭಿಸಿರುವ ಸಾಧ್ಯತೆಯಿದೆ. ತಪ್ಪಿಸಿಕೊಂಡಿರುವ ಕೈದಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಇವರಲ್ಲಿ ಹಲವರು ಭಯೋತ್ಪಾದಕ ಕೃತ್ಯಗಳಿಗಾಗಿ ಜೈಲುಪಾಲಾಗಿದ್ದರು. ಚರ್ಮನ್ ಜೈಲು ಇರಾನ್ನ ಗಡಿಭಾಗದಲ್ಲಿ ಇರುವುದರಿಂದ ತಪ್ಪಿಸಿಕೊಂಡ ಕೈದಿಗಳು ಗಡಿದಾಟಿ ಇರಾನ್ ಪ್ರವೇಶಿಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.