ಕರಾಚಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ; ಕನಿಷ್ಠ ಇಬ್ಬರು ಮೃತ್ಯು
PC : AP
ಇಸ್ಲಮಾಬಾದ್: ಪಾಕಿಸ್ತಾನದ ಕರಾಚಿಯಲ್ಲಿ ಶುಕ್ರವಾರ ಜಪಾನ್ ಪ್ರಜೆಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಟ ಇಬ್ಬರು ಸಾವನ್ನಪ್ಪಿದ್ದಾರೆ. ಇತರ ಮೂವರು ಗಾಯಗೊಂಡಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ವಾಹನದಲ್ಲಿದ್ದ ಎಲ್ಲಾ ವಿದೇಶೀಯರೂ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ.
ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಹತ್ಯೆಯಾದ ಉಗ್ರರಲ್ಲಿ ಒಬ್ಬನ ದೇಹಕ್ಕೆ ಆತ್ಮಹತ್ಯಾ ಜಾಕೆಟ್ ಮತ್ತು ಗ್ರೆನೇಡ್ಗಳನ್ನು ಕಟ್ಟಲಾಗಿತ್ತು. ಸ್ಫೋಟದಲ್ಲಿ ಮತ್ತೊಂದು ವಾಹನಕ್ಕೂ ಹಾನಿಯಾಗಿದೆ. ವಾಹನದಲ್ಲಿದ್ದ ಜಪಾನೀ ಪ್ರಜೆಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಹೇಳಿವೆ. ಇದು ಭಯೋತ್ಪಾದಕ ದಾಳಿಯಾಗಿದ್ದು ಗಾಯಗೊಂಡವರಲ್ಲಿ ಇಬ್ಬರು ಭದ್ರತಾ ಯೋಧರು ಸೇರಿದ್ದಾರೆ ಎಂದು ಕರಾಚಿ ಪೊಲೀಸರು ದೃಢಪಡಿಸಿದ್ದಾರೆ. ಯಾವುದೇ ಸಂಘಟನೆ ದಾಳಿಯ ಹೊಣೆ ವಹಿಸಿಕೊಂಡಿಲ್ಲ ಎಂದು ಕರಾಚಿ ಪೊಲೀಸ್ ವಕ್ತಾರ ಅಬ್ರಾರ್ ಹುಸೈನ್ ಬಲೋಚ್ ಹೇಳಿದ್ದಾರೆ.