ಪಾಕಿಸ್ತಾನ: ಗಣಿ ದುರಂತದಲ್ಲಿ ಮೃತರ ಸಂಖ್ಯೆ 11ಕ್ಕೆ ಏರಿಕೆ
PC ; PTI
ಕರಾಚಿ: ಮಿಥೇನ್ ಅನಿಲ ಶೇಖರಣೆ ಮತ್ತು ಸ್ಫೋಟದಿಂದ ಪಾಕಿಸ್ತಾನದಲ್ಲಿ ಕಲ್ಲಿದ್ದಲ ಗಣಿ ಕುಸಿದುಬಿದ್ದ ಘಟನೆಯಲ್ಲಿ 11 ಕಾರ್ಮಿಕರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಬಲೂಚಿಸ್ತಾನ್ ಪ್ರಾಂತದ ಕ್ವೆಟಾ ನಗರಕ್ಕಿಂತ ಸುಮಾರು 40 ಕಿ.ಮೀ ದೂರದ ಸಂಜ್ದಿ ಪ್ರದೇಶದಲ್ಲಿ ಕಲ್ಲಿದ್ದಲ ಗಣಿ ಕುಸಿದಿದ್ದು 12 ಕಾರ್ಮಿಕರು ಗಣಿಯೊಳಗೆ ಸಿಕ್ಕಿಬಿದ್ದಿದ್ದರು. ಶೋಧ ಮತ್ತು ರಕ್ಷಣಾ ಕಾರ್ಯಕರ್ತರು 11 ಮೃತದೇಹಗಳನ್ನು ಪತ್ತೆಹಚ್ಚಿ ಗಣಿಯಾಳದಿಂದ ಹೊರಗೆ ತಂದಿದ್ದಾರೆ. ಇನ್ನೂ ಒಬ್ಬ ಕಾರ್ಮಿಕ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ. ಕುಸಿದಿರುವ ಗಣಿಯಲ್ಲಿ ಸಿಲುಕಿರುವ ಕಾರ್ಮಿಕ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಗಣಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಣಿಯೊಳಗೆ ಕಾರ್ಮಿಕರು ಕೆಲಸ ಮಾಡುತ್ತಿರುವಾಗ ಗಣಿಯಲ್ಲಿ ಮಿಥೇನ್ ಅನಿಲ ಶೇಖರಣೆಗೊಂಡು ಸ್ಫೋಟ ಸಂಭವಿಸಿದೆ. ಗಣಿಯೊಳಗೆ ವಿಷಾನಿಲ ತುಂಬಿದ್ದರಿಂದ ಹಾಗೂ ಗಣಿ ಕುಸಿದಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು . ಸರಿಯಾದ ಗಣಿಗಾರಿಕೆ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಬಲೂಚಿಸ್ತಾನ್ ಸರಕಾರದ ವಕ್ತಾರ ಶಾಹಿದ್ ರಿಂದ್ ಹೇಳಿದ್ದಾರೆ.