ಪಾಕಿಸ್ತಾನ: ಪ್ರತ್ಯೇಕ ಕಾರ್ಯಾಚರಣೆಯಲ್ಲಿ 22 ಉಗ್ರರು, 6 ಯೋಧರ ಸಾವು
ಸಾಂದರ್ಭಿಕ ಚಿತ್ರ | PC : NDTV
ಪೇಷಾವರ: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವ ಪ್ರಾಂತದಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕನಿಷ್ಟ 22 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದು 6 ಯೋಧರು ಸಾವನ್ನಪ್ಪಿರುವುದಾಗಿ ಸೇನಾಪಡೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಖೈಬರ್ ಪಖ್ತುಂಖ್ವದ ಟ್ಯಾಂಕ್, ಉತ್ತರ ವಝೀರಿಸ್ತಾನ್ ಮತ್ತು ಥಾಲ್ ಜಿಲ್ಲೆಗಳಲ್ಲಿ ಡಿಸೆಂಬರ್ 6 ಮತ್ತು 7ರಂದು ಗುಪ್ತಚರ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಟ್ಯಾಂಕ್ ಜಿಲ್ಲೆಯ ಗುಲ್ ಇಮಾಮ್ ಪ್ರದೇಶದಲ್ಲಿ ಭಯೋತ್ಪಾದಕರ ಚಲನ ವಲನದ ಬಗ್ಗೆ ದೊರೆತ ಮಾಹಿತಿಯಂತೆ ನಡೆಸಿದ ಕಾರ್ಯಾಚರಣೆಯಲ್ಲಿ 9 ಉಗ್ರರು ಹತರಾಗಿದ್ದು 6 ಉಗ್ರರು ಗಾಯಗೊಂಡಿದ್ದಾರೆ. ಉತ್ತರ ವಝೀರಿಸ್ತಾನದಲ್ಲಿ ಕನಿಷ್ಟ 10 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದರೆ, ಥಾಲ್ ಜಿಲ್ಲೆಯಲ್ಲಿ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸುವ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಲಾಗಿದ್ದು ಮೂವರು ಉಗ್ರರು ಹತರಾಗಿದ್ದಾರೆ. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ 6 ಯೋಧರೂ ಸಾವನ್ನಪ್ಪಿರುವುದಾಗಿ ಭದ್ರತಾ ಪಡೆಯ ಮೂಲಗಳು ಹೇಳಿವೆ.