ಪಾಕಿಸ್ತಾನ್ ಏರ್ಲೈನ್ಸ್ ಖಾಸಗೀಕರಣ ಪ್ರಕ್ರಿಯೆ ಶೀಘ್ರ ಅಂತಿಮ : ವರದಿ
ಇಸ್ಲಮಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ | PC : X
ವಾಷಿಂಗ್ಟನ್ : ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಮತ್ತು ಇಸ್ಲಮಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಕ್ರಿಯೆಯನ್ನು ನವೆಂಬರ್ ನಲ್ಲಿ ಅಂತಿಮಗೊಳಿಸುವ ವಿಶ್ವಾಸವಿದೆ ಎಂದು ವಿತ್ತಸಚಿವ ಮುಹಮ್ಮದ್ ಔರಂಗಜೇಬ್ ಹೇಳಿದ್ದಾರೆ.
ವಾಷಿಂಗ್ಟನ್ನಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕ್ನ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು `ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ನ ಖಾಸಗೀಕರಣ ಪ್ರಕ್ರಿಯೆ 2024ರ ಜೂನ್ಗೆ ಅಂತ್ಯಗೊಳ್ಳುವ ನಿರೀಕ್ಷೆಯಿತ್ತು. ಆದರೆ ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಆಸಕ್ತ ಪಾರ್ಟಿಗಳ ಕಾರ್ಯತತ್ಪರತೆಯನ್ನು ಖಾತರಿಪಡಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ. ವಾಸ್ತವವೆಂದರೆ, ಯಾವುದೇ ವಿದೇಶಿ ಹೂಡಿಕೆದಾರ ಅಥವಾ ಸ್ಥಳೀಯ ಹೂಡಿಕೆದಾರರು ಗಣನೀಯ ಪ್ರಮಾಣದ ಹಣವನ್ನು ವಿನಿಯೋಗಿಸುವಾಗ ಅಡಿಪಾಯ ಗಟ್ಟಿಯಿರುವುದನ್ನು ಖಚಿತಪಡಿಸಲು ಬಯಸುತ್ತಾರೆ. ಆದ್ದರಿಂದ ಈ ಪ್ರಕ್ರಿಯೆಗೆ ಇನ್ನಷ್ಟು ಕಾಲಾವಕಾಶ ನೀಡಲು ಸರಕಾರ ನಿರ್ಧರಿಸಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.