ಅಫ್ಘಾನಿಸ್ತಾನದಲ್ಲಿ ಪಾಕ್ ವೈಮಾನಿಕ ದಾಳಿ | ಮಹಿಳೆಯರು, ಮಕ್ಕಳ ಸಹಿತ 46 ಮಂದಿ ಮೃತ್ಯು
ಪ್ರತೀಕಾರದ ಎಚ್ಚರಿಕೆ ನೀಡಿದ ತಾಲಿಬಾನ್
PC: x.com/theAshleyMolly
ಕಾಬೂಲ್ : ಪೂರ್ವ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 46 ಮಂದಿ ಸಾವನ್ನಪ್ಪಿರುವುದಾಗಿ ಅಫ್ಘಾನ್ ಸರಕಾರ ಬುಧವಾರ ಹೇಳಿದೆ.
ಪಾಕಿಸ್ತಾನದ ಗಡಿಯ ಸನಿಹದಲ್ಲಿರುವ ಪರ್ವತ ಪ್ರದೇಶ ಪಕ್ಟಿಕಾ ಪ್ರಾಂತದಲ್ಲಿ ಉಗ್ರಗಾಮಿಗಳನ್ನು ಹತ್ಯೆ ಮಾಡಲು ಹಾಗೂ ತರಬೇತಿ ಸೌಲಭ್ಯವನ್ನು ಧ್ವಂಸಗೊಳಿಸುವುದು ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಪಾಕಿಸ್ತಾನದ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ಕಳೆದ ವಾರ ಅಫ್ಘಾನ್ ಗಡಿಭಾಗದ ಸನಿಹದಲ್ಲಿ ಪಾಕಿಸ್ತಾನದ ಸೇನಾ ಠಾಣೆಯ ಮೇಲೆ ಟಿಟಿಪಿ ನಡೆಸಿದ ದಾಳಿಯಲ್ಲಿ 16 ಯೋಧರು ಸಾವನ್ನಪ್ಪಿದ್ದರು.
ವೈಮಾನಿಕ ದಾಳಿಯಲ್ಲಿ 27 ಮಹಿಳೆಯರು, ಮಕ್ಕಳ ಸಹಿತ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನಿ ತಾಲಿಬಾನಿ ಎಂದು ಕರೆಸಿಕೊಳ್ಳುವ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ವಕ್ತಾರ ಮುಹಮ್ಮದ್ ಖುರಸ್ಸಾನಿ ಹೇಳಿರುವುದಾಗಿ ವರದಿಯಾಗಿದೆ.
ಮಂಗಳವಾರ ತಡರಾತ್ರಿ ಪಾಕಿಸ್ತಾನವು ಗಡಿ ಸನಿಹದ ಪಕ್ಟಿಕಾ ಪ್ರಾಂತದ ಬರ್ಮಾಲ್ ಜಿಲ್ಲೆಯ 4 ಪ್ರದೇಶಗಳ ಮೇಲೆ ಬಾಂಬ್ಗಳ ಸುರಿಮಳೆಗರೆದಿದೆ. ಕನಿಷ್ಠ 46 ಮಂದಿ ಸಾವನ್ನಪ್ಪಿದ್ದು ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಇತರ 6 ಮಂದಿ ಗಾಯಗೊಂಡಿದ್ದಾರೆ.
ʼಬಾಂಬ್ ದಾಳಿಗೆ ಪಾಕಿಸ್ತಾನದ ವಾಯು ಸೇನೆಯೇ ಹೊಣೆ' ಎಂದು ಅಫ್ಘಾನಿಸ್ತಾನ ಸರಕಾರದ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಫ್ಘಾನ್ ಭೂಪ್ರದೇಶದ ಮೇಲಿನ ಪಾಕಿಸ್ತಾನದ ದಾಳಿಯನ್ನು ರಕ್ಷಣಾ ಇಲಾಖೆ ಖಂಡಿಸಿದ್ದು `ಇದು ಸ್ಪಷ್ಟ ಆಕ್ರಮಣಶೀಲತೆಯಾಗಿದೆ. ಈ ಹೇಡಿತನದ ಕೃತ್ಯಕ್ಕೆ ಸೂಕ್ತ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ನಮ್ಮ ಪ್ರದೇಶ ಮತ್ತು ಸಾರ್ವಭೌಮತ್ವದ ರಕ್ಷಣೆಯನ್ನು ನಮ್ಮ ಅವಿನಾಭಾವ ಹಕ್ಕು ಎಂದು ಪರಿಗಣಿಸುತ್ತೇವೆ' ಎಂದಿದೆ.
ಕನಿಷ್ಠ 3 ಮನೆಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ. ಒಂದು ಮನೆಯಲ್ಲಿದ್ದ 18 ಮಂದಿ ಮೃತರಾಗಿದ್ದು ಕುಟುಂಬದ ಎಲ್ಲಾ ಸದಸ್ಯರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿದ ವರದಿ ಹೇಳಿದೆ.