ಇಂಧನ ಸಮಸ್ಯೆ: ಪಾಕಿಸ್ತಾನದಲ್ಲಿ 77 ವಿಮಾನಗಳ ಹಾರಾಟ ರದ್ದು
Photo: twitter.com/Official_PIA
ಹೊಸದಿಲ್ಲಿ: ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಗೆ ಇಂಧನ ಪೂರೈಕೆ ಮಾಡುತ್ತಿದ್ದ ಪಾಕಿಸ್ತಾನ್ ಸ್ಟೇಟ್ ಆಯಿಲ್ (ಪಿಎಸ್ಓ) ಸರಬರಾಜು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ 77 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ ಎಂದು ಡ್ವಾನ್ ವರದಿ ಮಾಡಿದೆ.
ಏಳು ದಿನಗಳ ಅವಧಿಯಲ್ಲಿ ಎರಡು ಸರ್ಕಾರಿ ಸಂಸ್ಥೆಗಳ ನಡುವೆ ಸಂಘರ್ಷ ಏರ್ಪಟ್ಟಿರುವುದು ಇದು ಎರಡನೇ ಬಾರಿ. ಪಿಐಎ ವಿಮಾನಯಾನ ಸಂಸ್ಥೆಯ ಬಾಕಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಪಿಎಸ್ಓ ವಾದ. ಈ ವಿಮಾನಯಾನ ಸಂಸ್ಥೆ 750 ಶತಕೋಟಿ ರೂಪಾಯಿ ನಷ್ಟದಲ್ಲಿದ್ದು, ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ.
ಭಾನುವಾರ ಪಾಕಿಸ್ತಾನದ ವಿಮಾನಯಾನ ಸಂಸ್ಥೆ 52 ವಿದೇಶಿ ಹಾಗೂ 29 ವಿಮಾನಗಳ ಯಾನವನ್ನು ರದ್ದುಪಡಿಸಿದೆ. ನಾಲ್ಕನ್ನು ಹೊರತುಪಡಿಸಿ ಎಲ್ಲ ಸಾಗರೋತ್ತರ ವಿಮಾನಗಳ ಯಾನ ರದ್ದುಪಡಿಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಲಾಹೋರ್-ಟೊರಂಟೊ, ಕೌಲಾಲಂಪುರ, ಇಸ್ಲಾಮಾಬಾದ್ ನಿಂದ ಬೀಜಿಂಗ್ ಮತ್ತು ಇಸ್ತಾಂಬೂಲ್ ವಿಮಾನಗಳು ಭಾನುವಾರ ಟೇಕಾಫ್ ಆಗಿವೆ ಎಂದು ವಿವರಿಸಿದ್ದಾರೆ.