ದೇಶದ ರಸಹ್ಯ ಸೋರಿಕೆ: ಇಮ್ರಾನ್ ವಿರುದ್ಧ ದೋಷಾರೋಪಣೆ
ಇಮ್ರಾನ್ಖಾನ್ | Photo: PTI
ಇಸ್ಲಮಾಬಾದ್: ಸರಕಾರದ ರಹಸ್ಯಗಳನ್ನು ಸೋರಿಕೆ ಮಾಡಿದ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯ ಮಾಜಿ ಪ್ರಧಾನಿ ಇಮ್ರಾನ್ಖಾನ್ ವಿರುದ್ಧ ಬುಧವಾರ ದೋಷಾರೋಪಣೆ ಮಾಡಿದ್ದು ಇದರೊಂದಿಗೆ ಮುಂದಿನ ವರ್ಷದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ಇಮ್ರಾನ್ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.
2022ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭ ಇಮ್ರಾನ್ಖಾನ್ ರಶ್ಯಕ್ಕೆ ಭೇಟಿ ನೀಡಿದ್ದರು. ಆ ಬಳಿಕ ತನ್ನ ಸರಕಾರವನ್ನು ಪದಚ್ಯುತಗೊಳಿಸಲು ಪಾಕ್ ಮಿಲಿಟರಿಯೊಂದಿಗೆ ಅಮೆರಿಕ ಪಿತೂರಿ ನಡೆಸಿರುವ ಬಗ್ಗೆ ವಾಷಿಂಗ್ಟನ್ನಲ್ಲಿರುವ ಪಾಕ್ ರಾಯಭಾರಿ ತನಗೆ ಪತ್ರ ಬರೆದಿದ್ದಾರೆ ಎಂದು ಇಮ್ರಾನ್ಖಾನ್ ಹೇಳಿಕೆ ನೀಡಿದ್ದರು. ಈ ಪತ್ರದ ವಿವರ ಮಾಧ್ಯಮಗಳಲ್ಲಿ ಸೋರಿಕೆಯಾಗಿತ್ತು.
ಆದರೆ ಆರೋಪ ನಿರಾಕರಿಸಿದ್ದ ಇಮ್ರಾನ್, ಬೇರೆ ಮೂಲಗಳಿಂದ ಪತ್ರದ ವಿವರ ಸೋರಿಕೆಯಾಗಿರಬಹುದು ಎಂದಿದ್ದರು. ಇದೀಗ ಪ್ರಕರಣ ಎದುರಿಸುತ್ತಿರುವ ಇಮ್ರಾನ್ಖಾನ್, ಆರೋಪ ಸಾಬೀತಾದರೆ 14 ವರ್ಷ ಜೈಲುಶಿಕ್ಷೆಗೆ ಗುರಿಯಾಗಬಹುದು ಅಥವಾ ಮರಣದಂಡನೆ ಶಿಕ್ಷೆಗೂ ಗುರಿಯಾಗಬಹುದು. ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಇಮ್ರಾನ್ಗೆ 3 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ. ಆದರೆ ಶಿಕ್ಷೆ ಅಮಾನತುಗೊಂಡಿರುವುದರಿಂದ ಇಮ್ರಾನ್ ಜಾಮೀನಿನಲ್ಲಿ ಬಿಡುಗಡೆಗೊಂಡು ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ಪ್ರಯತ್ನ ಮುಂದುವರಿದಿತ್ತು.
ಆದರೆ ಇದೀಗ ದಾಖಲಾಗಿರುವ ರಹಸ್ಯ ಸೋರಿಕೆ ಪ್ರಕರಣ ಗಂಭೀರವಾಗಿದ್ದು ಇಮ್ರಾನ್ಗೆ ಭಾರೀ ಹಿನ್ನಡೆಯಾಗಿದೆ ಎಂದು ವರದಿ ಹೇಳಿದೆ.