ಪಾಕ್: 3 ಕ್ಷೇತ್ರಗಳ ಚುನಾವಣಾ ಫಲಿತಾಂಶ ಅಮಾನತುಗೊಳಿಸಿದ ಹೈಕೋರ್ಟ್
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಕಳೆದ ವಾರ ನಡೆದ ಚುನಾವಣೆಯ 3 ಕ್ಷೇತ್ರಗಳ ಫಲಿತಾಂಶವನ್ನು ಇಸ್ಲಮಾಬಾದ್ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ.
ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಬೆಂಬಲಿತ ಅಭ್ಯರ್ಥಿಗಳಾದ ಅಮೀರ್ ಮುಘಲ್, ಶೋಯಬ್ ಶಹೀನ್ ಮತ್ತು ಮುಹಮ್ಮದ್ ಆಲಿ ಬುಖಾರಿ ಚುನಾವಣೆಯಲ್ಲಿ ಸೋತಿರುವುದಾಗಿ ಚುನಾವಣಾ ಆಯೋಗ ಘೋಷಿಸಿತ್ತು. ಆದರೆ ಮತ ಎಣಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದಾಗಿ ಆರೋಪಿಸಿದ್ದ ಈ ಮೂವರು ಅಭ್ಯರ್ಥಿಗಳು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಎನ್‍ಎ-46, ಎನ್‍ಎ-47 ಮತ್ತು ಎನ್‍ಎ-48 ಕ್ಷೇತ್ರಗಳ ಫಲಿತಾಂಶಕ್ಕೆ ಸಂಬಂಧಿಸಿ ಪಾಕಿಸ್ತಾನ ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಅಮಾನತುಗೊಳಿಸಿದ್ದು, ಈ ಮೂರು ಕ್ಷೇತ್ರಗಳಲ್ಲಿ ಕ್ರಮವಾಗಿ ಅಂಜುಮ್ ಅಖೀಲ್‍ಖಾನ್, ತಾರಿಖ್ ಫಝಲ್ ಚೌಧರಿ ಮತ್ತು ರಾಜಾ ಖುರ್ರಮ್ ನವಾಝ್ ಗೆದ್ದಿದ್ದಾರೆ ಎಂಬ ಘೋಷಣೆಗೆ ತಡೆ ನೀಡಿದೆ.
Next Story