ಮಿತ್ರರಾಷ್ಟ್ರಗಳನ್ನು ಸಂಪರ್ಕಿಸಿ ರಾಜತಾಂತ್ರಿಕ ಬೆಂಬಲ ಕೋರಿದ ಪಾಕಿಸ್ತಾನ
ಚೀನಾ, ಟರ್ಕಿ, ಇರಾನ್, ಈಜಿಪ್ಟ್, ಸೌದಿ ಜತೆ ಮಾತುಕತೆ

ಇಸ್ಲಾಮಾಬಾದ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಭಾರತದ ಜೊತೆಗಿನ ಉದ್ವಿಗ್ನತೆ ಹೆಚ್ಚಿರುವಂತೆಯೇ ಪಾಕಿಸ್ತಾನದ ಉನ್ನತ ನಾಯಕರು ಪ್ರಾದೇಶಿಕ ಮಿತ್ರರಾಷ್ಟ್ರಗಳಾದ ಚೀನಾ, ಸೌದಿ ಅರೆಬಿಯಾ, ಇರಾನ್, ಈಜಿಪ್ಟ್ ಮುಖಂಡರನ್ನು ಸಂಪರ್ಕಿಸಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ರವಾನಿಸಿದ್ದು ರಾಜತಾಂತ್ರಿಕ ಬೆಂಬಲ ಕೋರಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಷಾಕ್ ದಾರ್ ಶನಿವಾರ ಈಜಿಪ್ಟ್, ಟರ್ಕಿ ಮತ್ತು ಸೌದಿ ಅರೆಬಿಯಾದ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದು ರಾಜತಾಂತ್ರಿಕ ಬೆಂಬಲ ಕೋರಿದ್ದಾರೆ.
ಪ್ರಧಾನಿ ಶಹಬಾಝ್ ಷರೀಫ್ ಶನಿವಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ಜತೆ ಮಾತುಕತೆ ನಡೆಸಿದ್ದು , ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಸುವಂತಾಗಲು ಇರಾನ್ ನಡೆಸುವ ಯಾವುದೇ ಪ್ರಯತ್ನವನ್ನು ಸ್ವಾಗತಿಸುವುದಾಗಿ ಹೇಳಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಉಪಪ್ರಧಾನಿ, ವಿದೇಶಾಂಗ ಸಚಿವ ದಾರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ದೂರವಾಣಿಯಲ್ಲಿ ನಡೆದ ಮಾತುಕತೆ ಸಂದರ್ಭ ಇತ್ತೀಚಿನ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು. ಇಬ್ಬರು ನಾಯಕರೂ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಪುನರುಚ್ಚರಿಸಿದರು ಮತ್ತು ಪ್ರಾದೇಶಿಕ ಸ್ಥಿರತೆಯ ಬಗ್ಗೆ ಕಳವಳವನ್ನು ಹಂಚಿಕೊಂಡರು. ಪಾಕ್ ವಿದೇಶಾಂಗ ಸಚಿವರು ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು, ಪಾಕಿಸ್ತಾನದ ವಿರುದ್ಧದ ಆಧಾರರಹಿತ ಪ್ರಚಾರವನ್ನು ಸ್ಪಷ್ಟವಾಗಿ ತಿರಸ್ಕರಿಸಿದರು ಎಂದು ಪಾಕ್ ವಿದೇಶಾಂಗ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಉಕ್ಕಿನಷ್ಟು ಬಲಿಷ್ಠವಾದ ಪಾಕಿಸ್ತಾನ-ಚೀನಾ ಸ್ನೇಹಕ್ಕಾಗಿ ಪಾಕಿಸ್ತಾನದ ಬದ್ಧತೆಯನ್ನು ಮತ್ತು ಸಾರ್ವಕಾಲಿಕ ಕಾರ್ಯತಂತ್ರದ ಸಹಕಾರಿ ಸಹಭಾಗಿತ್ವದ ಪರಿಕಲ್ಪನೆಗೆ ಪಾಕಿಸ್ತಾನದ ಬದ್ಧತೆಯನ್ನು ದಾರ್ ಪುನರುಚ್ಚರಿಸಿದರು. ಎರಡೂ ಕಡೆಯವರು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಎತ್ತಿಹಿಡಿಯಲು, ಪರಸ್ಪರ ಗೌರವ ಮತ್ತು ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ಏಕಪಕ್ಷೀಯತೆ ಮತ್ತು ಅಧಿಪತ್ಯದ ನೀತಿಗಳನ್ನು ಜಂಟಿಯಾಗಿ ವಿರೋಧಿಸಲು ಎರಡೂ ಕಡೆಯವರು ತಮ್ಮ ದೃಢ ಸಂಕಲ್ಪವನ್ನು ಪುನರುಚ್ಚರಿಸಿದರು ಎಂದು ಹೇಳಿಕೆ ತಿಳಿಸಿದೆ.
ಈ ಪ್ರದೇಶ ಮತ್ತು ಅದರಾಚೆಗೂ ಶಾಂತಿ, ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯ ಹಂಚಿಕೆಯ ಉದ್ದೇಶಗಳನ್ನು ಮುನ್ನಡೆಸಲು ಎಲ್ಲಾ ಹಂತಗಳಲ್ಲಿ ನಿಕಟ ಸಂವಹನ ಮತ್ತು ಸಮನ್ವಯವನ್ನು ಕಾಪಾಡಿಕೊಳ್ಳಲು ಇಬ್ಬರು ನಾಯಕರೂ ಒಪ್ಪಿಕೊಂಡರು ಎಂದು ವಿದೇಶಾಂಗ ಇಲಾಖೆ ಹೇಳಿದೆ.