ಪಾಕಿಸ್ತಾನ ಐಎಸ್ಐ ಮುಖ್ಯಸ್ಥ ನದೀಮ್ ಅಂಜುಮ್ ಸೇವಾವಧಿ ಒಂದು ವರ್ಷ ವಿಸ್ತರಣೆ
Photo: NDTV
ಇಸ್ಲಮಾಬಾದ್: ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥ ನದೀಮ್ ಅಂಜುಮ್ ಅವರ ಸೇವಾವಧಿಯನ್ನು ವಿಸ್ತರಿಸಲಾಗಿದ್ದು, ಅವರು ಪಾಕಿಸ್ತಾನದ ಐಎಸ್ಐ ಪ್ರಧಾನ ನಿರ್ದೇಶಕರಾಗಿ ಇನ್ನೂ ಒಂದು ವರ್ಷ ಮುಂದುವರಿಯಲಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು CNN-News18 ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನದ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಅವರು ಕರಾಚಿಯಲ್ಲಿ ಗಣ್ಯ ಉದ್ಯಮಿಯೊಬ್ಬರೊಂದಿಗೆ ಮುಖ್ಯ ಸಭೆಯೊಂದನ್ನು ನಡೆಸಿದ ಬೆನ್ನಿಗೇ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥರ ಸೇವಾವಧಿಯನ್ನು ಮತ್ತೊಂದು ವರ್ಷ ವಿಸ್ತರಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಹಾಗೂ ಐಎಸ್ಐ ಪ್ರಧಾನ ನಿರ್ದೇಶಕ ನದೀಂ ಅಂಜುಂ ನಡುವೆ ಸೌಹಾರ್ದ ಸಂಬಂಧವಿದೆ. ಈ ನಡೆಯ ಕುರಿತು ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಪಕ್ಷದ ಮುಖ್ಯಸ್ಥ ನವಾಜ್ ಶರೀಫ್ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ ಎಂದೂ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟವರ್ತಿ ಎಂದು ಹೇಳಲಾಗಿದ್ದ ಜನರಲ್ ಫೈಝ್ ಹಮೀದ್ ಬದಲಿಗೆ ನದೀಂ ಅಂಜುಂ ನೇಮಕವಾಗಿದ್ದರು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ಸೇನಾ ಸಿಬ್ಬಂದಿ ಮುಖ್ಯಸ್ಥ ಅಸೀಂ ಮುನೀರ್ ನಡುವೆ ಸೌಹಾರ್ದಯುತ ಬಾಂಧವ್ಯವಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಈ ವಾರಾಂತ್ಯದಲ್ಲಿ ನದೀಂ ಅಂಜುಂ ಅವರ ಸೇವಾವಧಿ ಅಂತ್ಯಗೊಳ್ಳಬೇಕಿತ್ತು. ಅವರ ಬದಲಿಗೆ ಲೆಫ್ಟಿನೆಂಟ್ ಜನರಲ್ ಶಹೀದ್ ಇಮ್ತಿಯಾಝ್ ಐಎಸ್ಐನ ನೂತನ ಮುಖ್ಯಸ್ಥರಾಗಲಿದ್ದಾರೆ ಎಂದು ವಾರಾಂತ್ಯದ ದೃಢಪಡದ ವರದಿಗಳು ಹೇಳಿದ್ದವು. ಆದರೆ, ಅವೆಲ್ಲ ವದಂತಿಗಳು ಎಂದು ಹಾಲಿ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥರಾದ ನದೀಂ ಅಂಜುಂ ರಾಷ್ಟ್ರೀಯ ಭದ್ರತಾ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಲಂಡನ್ ನ ಕಿಂಗ್ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕಾ ರಕ್ಷಣಾ ಇಲಾಖೆಯು ನಡೆಸುತ್ತಿರುವ ಭದ್ರತಾ ಅಧ್ಯಯನ ಕೇಂದ್ರವಾದ ಏಶ್ಯಾ-ಪೆಸಿಫಿಕ್ ಕೇಂದ್ರ(DKI APCSS)ದಲ್ಲಿ ಸುಧಾರಿತ ಭದ್ರತಾ ಅಧ್ಯಯನ ಕೋರ್ಸ್ ಅನ್ನು ಮುಗಿಸಿದ್ದಾರೆ.
ಇದಕ್ಕೂ ಮುನ್ನ, ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ನೆಲೆಯಲ್ಲಿ ಐಎಸ್ಐ ಮಹಾ ನಿರ್ದೇಶಕರಾಗಿದ್ದ ಜನರಲ್ ಅಖ್ತರ್ ಅಬ್ದುಲ್ ರೆಹಮಾನ್ ಖಾನ್ ಹಾಗೂ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶುಜಾ ಪಾಶಾ ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು. ಐಎಸ್ಐ ಮುಖ್ಯಸ್ಥ ಹುದ್ದೆಯ ಸೇವಾವಧಿ ವಿಸ್ತರಣೆ ಪಡೆಯುತ್ತಿರುವ ಮೂರನೆಯ ವ್ಯಕ್ತಿ ನದೀಂ ಅಂಜುಂ ಆಗಿದ್ದಾರೆ.