ಪಾಕಿಸ್ತಾನ ಚುನಾವಣೆ: ಜೈಲಿನಿಂದಲೇ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಇಮ್ರಾನ್ ಖಾನ್ (File Photo: PTI)
ಇಸ್ಲಮಾಬಾದ್: ಪಾಕಿಸ್ತಾನದ ಮಹತ್ವದ ಸಾರ್ವತ್ರಿಕ ಚುನಾವಣೆ ಪ್ರಗತಿಯಲ್ಲಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಕಾರಾಗೃಹ ಬಂಧನದಲ್ಲಿರುವ ಪ್ರಮುಖ ರಾಜಕೀಯ ನಾಯಕರು ಅಂಚೆ ಮತಪತ್ರದ ಮೂಲಕ ತಮ್ಮ ಮತ ಚಲಾಯಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸಿದ ರಾಜಕೀಯ ನಾಯಕರ ಪೈಕಿ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹ್ಮೂದ್ ಖುರೇಷಿ, ಮಾಜಿ ಪಂಜಾಬ್ ಮುಖ್ಯಮಂತ್ರಿ ಚೌಧರಿ ಪರ್ವೇಝ್ ಎಲಾಹಿ, ಅವಾಮಿ ಮುಸ್ಲಿಂ ಲೀಗ್ ಮುಖ್ಯಸ್ಥ ಶೇಖ್ ರಶೀದ್ ಹಾಗೂ ಮಾಜಿ ಮಾಹಿತಿ ಸಚಿವ ಫವಾದ್ ಚೌಧರಿ ಸೇರಿದ್ದಾರೆ ಎಂದು ಅಡಿಯಾಲ ಕಾರಾಗೃಹ ಮೂಲಗಳನ್ನು ಉಲ್ಲೇಖಿಸಿ ಬುಧವಾರ Dawn News ವರದಿ ಮಾಡಿದೆ.
ಅಡಿಯಾಲ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಏಳು ಸಾವಿರ ಕೈದಿಗಳ ಪೈಕಿ, ಗಣಕೀಕೃತ ರಾಷ್ಟ್ರೀಯ ಗುರುತಿನ ಚೀಟಿ ಹೊಂದಿದ್ದ ಕೈದಿಗಳಿಗೆ ಮಾತ್ರ ಮತ ಚಲಾವಣೆಗೆ ಅವಕಾಶ ನೀಡಿರುವುದರಿಂದ ನೂರಕ್ಕೂ ಕಡಿಮೆ ಕೈದಿಗಳು ಮಾತ್ರ ಮತ ಚಲಾಯಿಸಿದ್ದಾರೆ. ಇದು ಅಡಿಯಾಲ ಜೈಲಿನಲ್ಲಿರುವ ಕೈದಿಗಳ ಸಂಖ್ಯೆಯಲ್ಲಿ ಸರಿಸುಮಾರು ಶೇ. 1ರಷ್ಟು ಮತದಾನ ಮಾತ್ರವಾಗಿದೆ ಎಂದು ವರದಿಯಾಗಿದೆ.