ಪಾಕಿಸ್ತಾನ: ನಾಮಪತ್ರ ಸಲ್ಲಿಸಿದ ಅಧ್ಯಕ್ಷ ಝರ್ದಾರಿ ಪುತ್ರಿ ಅಸೀಫಾ
ಅಸೀಫಾ ಭುಟ್ಟೋ | Photo : NDTV
ಇಸ್ಲಾಮಾಬಾದ್ : ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ ಅವರ ಕಿರಿಯ ಪುತ್ರಿ ಅಸೀಫಾ ಭುಟ್ಟೋ ಚುನಾವಣಾ ರಾಜಕೀಯ ಪ್ರವೇಶಿಸಲು ಸಿದ್ಧತೆ ನಡೆಸಿದ್ದು ರಾಷ್ಟ್ರೀಯ ಅಸೆಂಬ್ಲಿಯ ಒಂದು ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ಫೆಬ್ರವರಿ 8 ರಂದು ನಡೆದಿದ್ದ ಉಪಚುನಾವಣೆಯಲ್ಲಿ ಆಸಿಫ್ ಆಲಿ ಝರ್ದಾರಿ ಸಿಂಧ್ ಪ್ರಾಂತದ ಶಹೀದ್ ಬೆಂಝಿರಾಬಾದ್ ಜಿಲ್ಲೆಯ ಎನ್ಎ-207 ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆದರೆ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿದ್ದು ಎಪ್ರಿಲ್ 21ರಂದು ಉಪಚುನಾವಣೆ ನಡೆಯಲಿದೆ. ಇದೀಗ ಈ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ಅಸೀಫಾ ಭುಟ್ಟೋ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಆಸಿಫ್ ಆಲಿ ತಮ್ಮ ಪುತ್ರಿಯನ್ನು ಪ್ರಥಮ ಮಹಿಳೆಯೆಂದು ಹೆಸರಿಸಿದ್ದರು. 2007ರಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹತರಾಗಿದ್ದ ಮಾಜಿ ಪ್ರಧಾನಿ ಬೇನಝೀರ್ ಭುಟ್ಟೋ ಅವರ ಮೂವರು ಮಕ್ಕಳಲ್ಲಿ ಅಸೀಫಾ ಕಿರಿಯವರು. ಭಕ್ತಾವರ್ ಮತ್ತು ಬಿಲಾವಲ್ ಭುಟ್ಟೋ ಅವರ ತಂಗಿಯಾಗಿರುವ ಅಸೀಫಾ ತಮ್ಮ ತಾಯಿಯ ಉತ್ತರಾಧಿಕಾರಿಯೆಂದು ಬಿಂಬಿಸಲ್ಪಟ್ಟಿದ್ದಾರೆ.