ಪಾಕಿಸ್ತಾನ | ಭದ್ರತಾ ಚೆಕ್ಪೋಸ್ಟ್ ಮೇಲೆ ಉಗ್ರರ ದಾಳಿ; ಇಬ್ಬರು ಮೃತ್ಯು
ಸಾಂದರ್ಭಿಕ ಚಿತ್ರ / Photo:NDTV
ಪೇಷಾವರ : ಪ್ರಕ್ಷುಬ್ಧ ವಾಯವ್ಯ ಪ್ರಾಂತದಲ್ಲಿ ಮಂಗಳವಾರ ಬೆಳಿಗ್ಗೆ ಭದ್ರತಾ ಚೆಕ್ಪೋಸ್ಟ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಖೈಬರ್ ಪಖ್ತೂಂಕ್ವಾ ಪ್ರಾಂತದ ಡೆರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿನ ಡ್ರಾಬನ್ ನಗರದ ಭದ್ರತಾ ಚೆಕ್ಪೋಸ್ಟ್ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಲಾಗಿದೆ. ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಉಗ್ರರು ಪರಾರಿಯಾಗಿದ್ದಾರೆ. ಯಾವುದೇ ಗುಂಪು ದಾಳಿಯ ಹೊಣೆಯನ್ನು ವಹಿಸಿಕೊಂಡಿಲ್ಲ. ಆದರೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ ಗುಂಪಿನ ಕೃತ್ಯವೆಂದು ಶಂಕಿಸಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಖಾನ್ ಹೇಳಿದ್ದಾರೆ. ಕಳೆದ 9 ವರ್ಷಗಳಲ್ಲಿ ಈ ವರ್ಷ(2024) ಪಾಕಿಸ್ತಾನದ ಭದ್ರತಾ ಪಡೆಗಳಿಗೆ ಅತ್ಯಂತ ಮಾರಕವಾಗಿದ್ದು ಸರಾಸರಿ ಪ್ರತೀದಿನ ಸುಮಾರು 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2024ರಲ್ಲಿ ಕನಿಷ್ಠ 444 ಭಯೋತ್ಪಾದಕ ದಾಳಿಗಳು ಮತ್ತು 685 ಸಾವು ಸಂಭವಿಸಿದೆ ಎಂದು ಸಂಶೋಧನೆ ಮತ್ತು ಭದ್ರತಾ ಅಧ್ಯಯನಗಳ ಕೇಂದ್ರವು ಮಂಗಳವಾರ ತನ್ನ ವರದಿಯಲ್ಲಿ ಹೇಳಿದೆ.