26/11 ಮುಂಬೈ ಭಯೋತ್ಪಾದಕ ದಾಳಿ | ಆರೋಪಿ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಒಪ್ಪಿಗೆ
PHOTO : PTI
ವಾಶಿಂಗ್ಟನ್: ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾಗೆ ಭಾರಿ ಹಿನ್ನಡೆಯಾಗಿದೆ. 2008ರಲ್ಲಿ ನಡೆದಿದ್ದ ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಭಾಗಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಆತನನ್ನು ಹಸ್ತಾಂತರಿಸಬೇಕು ಎಂಬ ಭಾರತದ ಮನವಿಯನ್ನು ಒಂಭತ್ತನೆ ಸರ್ಕ್ಯೂಟ್ ನ ಅಮೆರಿಕ ಮೇಲ್ಮನವಿ ನ್ಯಾಯಾಲಯವು ಪುರಸ್ಕರಿಸಿದೆ. ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದದ ಪ್ರಕಾರ, ರಾಣನನ್ನು ಭಾರತಕ್ಕೆ ಹಸ್ತಾಂತರಿಸಬಹುದಾಗಿದೆ ಎಂದು ತೀರ್ಪು ನೀಡಿದೆ.
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಎಂಬ ಆರೋಪದಲ್ಲಿ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದಾಗಿದೆ ಎಂದು ತಮ್ಮ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದ್ದ ಕ್ಯಾಲಿಫೋರ್ನಿಯಾದ ಕೇಂದ್ರ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಣಾ ಸಲ್ಲಿಸಿದ್ದ ಮೇಲ್ಮನವಿಯನ್ನು ತಳ್ಳಿ ಹಾಕಿರುವ ಒಂಭತ್ತನೆ ಸರ್ಕ್ಯೂಟ್ ನ ಅಮೆರಿಕ ಮೇಲ್ಮನವಿ ನ್ಯಾಯಾಲಯವು, ಕ್ಯಾಲಿಫೋರ್ನಿಯಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
26/11 ಮುಂಬೈ ದಾಳಿಯಲ್ಲಿ ಭಾಗಿಯಾಗಿರುವ ಎಂಬ ಆರೋಪದಲ್ಲಿ ಸದ್ಯ ರಾಣಾನನ್ನು ಲಾಸ್ ಏಂಜಲೀಸ್ ನ ಜೈಲೊಂದರಲ್ಲಿ ಇರಿಸಲಾಗಿದೆ. ರಾಣಾ ಈ ಭಯೋತ್ಪಾದಕ ದಾಳಿಯ ಪ್ರಮುಖ ಪಿತೂರಿಗಾರನಾದ ಪಾಕಿಸ್ತಾನ-ಅಮೆರಿಕ ಮೂಲದ ಲಷ್ಕರ್-ಎ-ತೈಬಾದ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯ ಸಹಚರ ಎಂದು ಹೇಳಲಾಗಿದೆ.