ಪಾಕಿಸ್ತಾನ: ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾದ ಮರಿಯಂ ನವಾಝ್
ಮರ್ಯಮ್ ನವಾಝ್ | Photo: PTI
ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಾಂತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಗೆ ಮಾಜಿ ಪ್ರಧಾನಿ, ಪಿಎಂಎಲ್-ಎನ್ ಮುಖಂಡ ನವಾಝ್ ಷರೀಪ್ ಪುತ್ರಿ ಮರ್ಯಮ್ ನವಾಝ್ ಪಾತ್ರವಾಗಿದ್ದಾರೆ.
ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿ ಮರ್ಯಮ್ ಆಯ್ಕೆಗೊಂಡಿದ್ದು, ಇದು ದೇಶದ ಪ್ರತಿಯೊಬ್ಬ ಮಹಿಳೆಗೂ ಸಂದ ಗೌರವವಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.
ಪಿಎಂಎಲ್-ಎನ್ ಉಪಾಧ್ಯಕ್ಷೆಯಾಗಿರುವ 50 ವರ್ಷದ ಮರ್ಯಮ್ ಹಾಗೂ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ಪಿಟಿಐ ಪಕ್ಷದ ಬೆಂಬಲ ಪಡೆದ ಸುನ್ನು ಇತ್ತೆಹಾದ್ ಕೌನ್ಸಿಲ್(ಎಸ್ಐಸಿ)ನ ರಾಣಾ ಅಫ್ತಾಬ್ ಪಂಜಾಬ್ ಸಿಎಂ ಹುದ್ದೆಗೆ ಕಣದಲ್ಲಿದ್ದರು. ಆದರೆ ಮತದಾನಕ್ಕೂ ಮುನ್ನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲು ರಾಣಾ ಅಫ್ತಾಬ್ಗೆ ಅವಕಾಶ ನಿರಾಕರಿಸಿರುವುದನ್ನು ಖಂಡಿಸಿ ಎಸ್ಐಸಿ ಹಾಗೂ ಪಿಟಿಐ ಸದಸ್ಯರ ಸಭಾತ್ಯಾಗ ಮಾಡಿದರು. 327 ಸದಸ್ಯ ಬಲದ ವಿಧಾನಸಭೆಯಲ್ಲಿ 220 ಮತಗಳನ್ನು ಪಡೆದ ಮರ್ಯಮ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದಾಗಿ ಹೊಸದಾಗಿ ನೇಮಕಗೊಂಡಿದ್ದ ಸ್ಪೀಕರ್ ಮಲಿಕ್ ಅಹ್ಮದ್ ಖಾನ್ ಘೋಷಿಸಿದರು. ದ್ವೇಷ ರಾಜಕಾರಣ ನಡೆಸದೆ ಪ್ರಾಂತದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಮರ್ಯಮ್ ಹೇಳಿದ್ದಾರೆ.