ವೇತನ ಪಡೆಯದಿರಲು ಪಾಕ್ ಅಧ್ಯಕ್ಷ ಝರ್ದಾರಿ ನಿರ್ಧಾರ
ಆಸಿಫ್ ಅಲಿ ಝರ್ದಾರಿ | Photo: NDTV
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಚುನಾಯಿತ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ಅವರು ತನ್ನ ಅಧಿಕಾರಾವಧಿಯಲ್ಲಿ ವೇತನವನ್ನು ಪಡೆಯುವುದಿಲ್ಲವೆಂದು ಮಂಗಳವಾರ ಘೋಷಿಸಿದ್ದಾರೆ. ತನ್ನ ರಾಷ್ಟ್ರವು ತೀವ್ರ ಆರ್ಥಿಕ ದುಸ್ಥಿತಿಯ ಸವಾಲನ್ನು ಎದುರಿಸುತ್ತಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
68 ವರ್ಷ ವಯಸ್ಸಿ ಆಸಿಫ್ ಅಲಿ ಝರ್ದಾರಿ ಅವರು ಪಾಕಿಸ್ತಾನದ 16ನೇ ರಾಷ್ಟ್ರಾಧ್ಯಕ್ಷರಾಗಿ ರವಿವಾರ ಅಧಿಕಾರ ಸ್ವೀಕರಿಸಿದರು. ದೇಶದಲ್ಲಿ ವಿವೇಚನಾಯುತವಾದ ಆರ್ಥಿಕ ನಿರ್ವಹಣೆಯನ್ನು ಉತ್ತೇಜಿಸಲು ಹಾಗೂ ರಾಷ್ಟ್ರೀಯ ಬೊಕ್ಕಸಕ್ಕೆ ಹೊರೆಯಾಗದಂತೆ ನೋಡಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದೆ.
ಪಾಕಿಸ್ತಾನದ ಹಿಂದಿನ ಅಧ್ಯಕ್ಷ ಆಸಿಫ್ ಅಲಿ ತನ್ನ ಅಧಿಕಾರಾವಧಿಯಲ್ಲಿ ಮಾಸಿಕವಾಗಿ 8,46,550 ರೂ. ವೇತನ ಪಡೆಯುತ್ತಿದ್ದರು. ಝರ್ದಾರಿ ಅವರು ಪಾಕಿಸ್ತಾನದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ನೂತನ ಗೃಹ ಸಚಿವ ಮೊಹಸಿನ್ ನಕ್ವಿ ಕೂಡಾ ಝರ್ದಾರಿಯವರ ಹೆಜ್ಜೆಯನ್ನು ಅನುಸರಿಸಿದ್ದು, ವೇತನವನ್ನು ಪಡೆಯದೇ ಇರಲು ನಿರ್ಧರಿಸಿದ್ದಾರೆ. ಕಠಿಣವಾದ ಆರ್ಥಿಕ ಪರಿಸ್ಥಿತಿಯ ಈ ಸಂದರ್ಭದಲ್ಲಿ ಸವಾಲನ್ನು ಎದುರಿಸುತ್ತಿರುವುದರಿಂದ ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ನೆರವಾಗಲು ಪ್ರಯತ್ನಿಸುವುದಾಗಿ ಅವರು ಹೇಳಿದ್ದಾರೆ.
ಸಾಲದ ಬಾಧೆಗೆ ಸಿಲುಕಿರುವ ಪಾಕಿಸ್ತಾನವು ತೀವ್ರವಾದ ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.