ಇಮ್ರಾನ್ ಪಕ್ಷದ ಆಂತರಿಕ ಚುನಾವಣೆ ತಿರಸ್ಕರಿಸಿದ ಚುನಾವಣಾ ಆಯೋಗ: ಪಕ್ಷದ ‘ಬ್ಯಾಟ್’ ಚಿಹ್ನೆಗೆ ತಡೆ
ಇಸ್ಲಮಾಬಾದ್: ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ(ಪಿಟಿಐ)ದ ಆಂತರಿಕ ಚುನಾವಣೆಯನ್ನು ತಿರಸ್ಕರಿಸಿರುವ ಪಾಕ್ ಚುನಾವಣಾ ಆಯೋಗ, ಪಕ್ಷದ ‘ಬ್ಯಾಟ್’ ಚಿಹ್ನೆಗೆ ತಡೆ ನೀಡಿದ್ದು ಇದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರೀ ಹಿನ್ನಡೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಕ್ಷದ ಸಂವಿಧಾನಕ್ಕೆ ಅನುಗುಣವಾಗಿ ಚುನಾವಣೆ ನಡೆಸಲು ಪಿಟಿಐ ವಿಫಲವಾಗಿದೆ. ಆದ್ದರಿಂದ ‘ಬ್ಯಾಟ್’ ಚಿಹ್ನೆ ಬಳಸಬಾರದು ಎಂದು ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ ಇಮ್ರಾನ್ ಖಾನ್ ಪಕ್ಷದ ‘ಬ್ಯಾಟ್’ ಚಿಹ್ನೆ ಜನಪ್ರಿಯವಾಗಿತ್ತು. ಡಿಸೆಂಬರ್ 2ರಂದು ನಡೆದ ಪಿಟಿಐ ಆಂತರಿಕ ಚುನಾವಣೆಯಲ್ಲಿ ಇಮ್ರಾನ್ ನಿಕಟವರ್ತಿ ಗೋಹರ್ ಖಾನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಗಿತ್ತು. ಆದರೆ ಪಕ್ಷದಿಂದ ದೂರಸರಿದಿರುವ ಮಾಜಿ ನಾಯಕ ಅಕ್ಬರ್ ಅಹ್ಮದ್ ನೇತೃತ್ವದಲ್ಲಿ ಪಕ್ಷದ ಕೆಲವು ಮುಖಂಡರು ಇದನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಚುನಾವಣೆಯ ಹೆಸರಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ದೂರಿದ್ದರು.
ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪಿಟಿಐ ‘ಇದು ಪ್ರಸಿದ್ಧ ಲಂಡನ್ ಯೋಜನೆಯ ಭಾಗವಾಗಿದ್ದು ಚುನಾವಣೆಯಲ್ಲಿ ಪಿಟಿಐ ಪಕ್ಷ ಸ್ಪರ್ಧಿಸುವುದನ್ನು ತಡೆಯುವ ಹತಾಶ ಮತ್ತು ನಾಚಿಕೆಗೇಡಿನ ಕ್ರಮವಾಗಿದೆ’ ಎಂದು ಟೀಕಿಸಿದೆ. ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಅಥವಾ ಪಕ್ಷದ ಅಭ್ಯರ್ಥಿಗಳನ್ನು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ಬಗ್ಗೆ ಶೀಘ್ರವೇ ನಿರ್ಧರಿಸಲಾಗುವುದು ಎಂದು ಪಕ್ಷದ ಮೂಲಗಳು ಹೇಳಿವೆ.