ಗಾಝಾದಿಂದ ಯಾವುದೇ ಫೆಲೆಸ್ತೀನೀಯರನ್ನು ಯಾರೂ ಹೊರಹಾಕುತ್ತಿಲ್ಲ: ಡೊನಾಲ್ಡ್ ಟ್ರಂಪ್

PC | NDTV
ವಾಷಿಂಗ್ಟನ್: ಗಾಝಾದಿಂದ ಯಾವುದೇ ಫೆಲೆಸ್ತೀನೀಯರನ್ನು ಯಾರೂ ಹೊರಹಾಕುತ್ತಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಿಹೇಳಿದ್ದಾರೆ.
ಶ್ವೇತಭವನದಲ್ಲಿ ಐರ್ಲ್ಯಾಂಡ್ ಪ್ರಧಾನಿ ಮೈಕೆಲ್ ಮಾರ್ಟಿನ್ ಜತೆ ಸಭೆ ನಡೆಸಿದ ಬಳಿಕ ಟ್ರಂಪ್ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು. ವರದಿಗಾರರು ` ಗಾಝಾ ಪಟ್ಟಿಯನ್ನು ವಶಕ್ಕೆ ಪಡೆಯುವ ಟ್ರಂಪ್ ಯೋಜನೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಎಂದು ಐರ್ಲ್ಯಾಂಡ್ ಪ್ರಧಾನಿಯನ್ನು ಪ್ರಶ್ನಿಸಿದಾಗ ಮಧ್ಯ ಪ್ರವೇಶಿಸಿದ ಟ್ರಂಪ್ ` ಈ ಯೋಜನೆಯು ಫೆಲೆಸ್ತೀನೀಯರನ್ನು ಹೊರಹಾಕುವುದನ್ನು ಒಳಗೊಂಡಿರುವುದಿಲ್ಲ. ಯಾರೂ ಯಾವುದೇ ಫೆಲೆಸ್ತೀನೀಯರನ್ನೂ ಹೊರಹಾಕುವುದಿಲ್ಲ' ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ.
ಗಾಝಾ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸುವ ನಿಲುವಿನಿಂದ ಹಿಂದೆ ಸರಿಯುವುದನ್ನು ಸೂಚಿಸುವ ಟ್ರಂಪ್ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹಮಾಸ್ ಪ್ರತಿಕ್ರಿಯಿಸಿದ್ದು `ಬಲಪಂಥೀಯ ಯೆಹೂದಿಗಳ ದೃಷ್ಟಿಕೋನದ ಜತೆ ಹೊಂದಾಣಿಕೆ ಮಾಡಿಕೊಳ್ಳದಂತೆ ' ಟ್ರಂಪ್ರನ್ನು ಆಗ್ರಹಿಸಿದೆ.
ಟ್ರಂಪ್ ಹೇಳಿಕೆಯನ್ನು ಈಜಿಪ್ಟ್ ಶ್ಲಾಘಿಸಿದೆ. ಟ್ರಂಪ್ ಹೇಳಿಕೆಯು ಗಾಝಾದಲ್ಲಿನ ಮಾನವೀಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿರುವುದನ್ನು ತಡೆಯುವ ಅಗತ್ಯತೆ ಮತ್ತು ಫೆಲೆಸ್ತೀನ್ ವಿಷಯಕ್ಕೆ ನ್ಯಾಯಸಮ್ಮತ, ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯುವ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಈಜಿಪ್ಟ್ ವಿದೇಶಾಂಗ ಇಲಾಖೆ ಗುರುವಾರ ಹೇಳಿದೆ.