ಮುಸ್ಲಿಂ ದ್ವೇಷ: ಇಸ್ರೇಲ್ ಸಂಘರ್ಷದ ನಡುವೆ ಅಮೆರಿಕದಲ್ಲಿ 6 ವರ್ಷದ ಫೆಲೆಸ್ತೀನಿ ಬಾಲಕನ ಹತ್ಯೆಗೈದ ಮನೆ ಮಾಲಕ
ಮೃತ ಬಾಲಕ ವದೀಯ ಅಲ್-ಫಯೋಮ್ / ಆರೋಪಿ ಜೋಸೆಫ್ ಝೂಬಾ (Credit: X)
ವಾಷಿಂಗ್ಟನ್: ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಅಮೆರಿಕಾದ ನೈಋತ್ಯ ಚಿಕಾಗೋದ ಪ್ಲೈನ್ಫೀಲ್ಡ್ ಪಟ್ಟಣದಲ್ಲಿ 71 ವರ್ಷದ ಮನೆ ಮಾಲಕನೊಬ್ಬ 6 ವರ್ಷದ ಫೆಲೆಸ್ತೀನಿ-ಅಮೆರಿಕನ್ ಬಾಲಕನನ್ನು ಇರಿದು ಸಾಯಿಸಿದ್ದಾನೆ ಹಾಗೂ ಆತನ ತಾಯಿಯನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ. ತಾಯಿ-ಮಗ ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂಬ ದ್ವೇಷಕ್ಕೆ ಆರೋಪಿ ಶನಿವಾರ ಬೆಳಿಗ್ಗೆ ಈ ಕೃತ್ಯವೆಸಗಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಹತ್ಯೆಗೀಡಾದ ಬಾಲಕನನ್ನು ವದೀಯ ಅಲ್-ಫಯೋಮ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಬಾಲಕನ ತಾಯಿ 911ಗೆ ಕರೆ ಮಾಡಿ ಸಹಾಯಕ್ಕೆ ಯಾಚಿಸಿದ್ದು, ಆರೋಪಿ ಜೋಸೆಫ್ ಝೂಬಾ ತಾಯಿ-ಮಗನ ಮನೆಯ ಪಕ್ಕದಲ್ಲಿಯೇ ಹಣೆಗೆ ಗಾಯವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಾಯಿ-ಮಗ ಇಬ್ಬರೂ ತಮ್ಮ ಮನೆಯ ಬೆಡ್ರೂಂನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಬಾಲಕನ ಹೊಟ್ಟೆಯ ಭಾಗದಿಂದ ಏಳು ಇಂಚಿನ ಬ್ಲೇಡ್ ಇದ್ದ ಮಿಲಿಟರಿ ಶೈಲಿಯ ಚೂರಿಯನ್ನು ವೈದ್ಯರು ಹೊರತೆಗೆದಿದ್ದಾರೆ. ಆತನಿಗೆ 26 ಬಾರಿ ಇರಿಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕಟುವಾಗಿ ಖಂಡಿಸಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದ ಕಾರಣ ಇದೊಂದು ದ್ವೇಷದ ಕೃತ್ಯ ಎಂದು ಪೊಲೀಸರು ಈಗಾಗಲೇ ಹೇಳಿದ್ದಾರೆ. ಇಂತಹ ದ್ವೇಷದ ಕೃತ್ಯಗಳಿಗೆ ಅಮೆರಿಕಾದಲ್ಲಿ ಆಸ್ಪದವಿಲ್ಲ ಎಂದು ಜೋ ಬೈಡನ್ ಹೇಳಿದ್ದಾರೆ.