ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ : ಫೆಲೆಸ್ತೀನ್ ಪ್ರಯತ್ನ ಪುನರಾರಂಭ
Photo : PTI
ರಮಲ್ಲಾ : ವಿಶ್ವಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯುವ ಪ್ರಯತ್ನವನ್ನು ಮಂಗಳವಾರ ಫೆಲೆಸ್ತೀನ್ ಅಧಿಕೃತವಾಗಿ ಪುನರಾರಂಭಿಸಿದೆ. 2012ರಿಂದಲೂ ವಿಶ್ವಸಂಸ್ಥೆಯಲ್ಲಿ ವೀಕ್ಷಕ ಸ್ಥಾನಮಾನ ಹೊಂದಿರುವ ಫೆಲೆಸ್ತೀನ್, ಪೂರ್ಣಪ್ರಮಾಣದ ಸದಸ್ಯತ್ವ ಪಡೆಯಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿದೆ.
ಪೂರ್ಣ ಪ್ರಮಾಣದ ಸದಸ್ಯತ್ವಕ್ಕಾಗಿ 2011ರಲ್ಲಿ ಸಲ್ಲಿಸಿರುವ ಅರ್ಜಿಯನ್ನು ಮತ್ತೆ ಪರಿಗಣಿಸುವಂತೆ ಕೋರಿ ಫೆಲೆಸ್ತೀನಿಯನ್ ನಾಯಕತ್ವದ ಪರವಾಗಿ ಕೋರಿಕೆ ಸಲ್ಲಿಸುವುದಾಗಿ ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ಗೆ ಪತ್ರ ಬರೆದಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪತ್ರವನ್ನು ಭದ್ರತಾ ಮಂಡಳಿಗೆ ರವಾನಿಸಲಾಗಿದ್ದು ಈ ತಿಂಗಳಲ್ಲೇ ಪರಿಶೀಲಿಸಬೇಕೆಂದು ಫೆಲೆಸ್ತೀನೀಯರು ಕೋರಿದ್ದಾರೆ.
`ಫೆಲೆಸ್ತೀನ್ನಲ್ಲಿ 2 ರಾಷ್ಟ್ರಗಳನ್ನು ರಚಿಸಲು 1947ರಿಂದ ಅಂತರಾಷ್ಟ್ರೀಯ ಸಮುದಾಯವು ನಿರ್ಧರಿಸಿದೆ. ಫೆಲೆಸ್ತೀನ್ ಸದಸ್ಯತ್ವಕ್ಕೆ ಒಪ್ಪಿಗೆ ನೀಡುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಂತರಾಷ್ಟ್ರೀಯ ಸಮುದಾಯದ ಕರ್ತವ್ಯವಾಗಿದೆ' ಎಂದು ರಿಯಾದ್ ಮನ್ಸೂರ್ ರನ್ನು ಉಲ್ಲೇಖಿಸಿದ ವರದಿ ಹೇಳಿದೆ.