“56 ವರ್ಷಗಳ ಅತಿಕ್ರಮಣದಿಂದ ಫೆಲೆಸ್ತೀನ್ ನಾಗರೀಕರ ಉಸಿರುಗಟ್ಟಿಸಲಾಗಿದೆ”
ಇಸ್ರೇಲ್ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವ ಸಂಸ್ಥೆಯ ಮುಖ್ಯಸ್ಥ
Photo: X/@antonioguterres
ನ್ಯೂಯಾರ್ಕ್: ಇಸ್ರೇಲ್ ಹಾಗೂ ಫೆಲೆಸ್ತೀನ್ ಸಶಸ್ತ್ರ ಪಡೆ ಹಮಾಸ್ ನಡುವಿನ ಬಿಕ್ಕಟ್ಟಿನಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಖಂಡಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್, ಕೂಡಲೇ ಗಾಝಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಅ.24ರಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯೆದುರು ಬಲವಾದ ಮನವಿ ಮಾಡಿದ್ದಾರೆ.
ಅ. 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಅಚ್ಚರಿಯ ದಾಳಿ ನಡೆಸಿದ ನಂತರ ಈ ಬಿಕ್ಕಟ್ಟು ನಾಟಕೀಯವಾಗಿ ತಾರಕಕ್ಕೇರಿದೆ. ಇದಕ್ಕೆ ಪ್ರತಿಯಾಗಿ ದಿಗ್ಬಂಧನ ಹೇರಲಾಗಿರುವ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಅವಿಶ್ರಾಂತ ಬಾಂಬ್ ದಾಳಿ ನಡೆಸುತ್ತಿದ್ದು, ಇದರಿಂದ ಗಮನಾರ್ಹ ಸಾವು-ನೋವುಗಳಾಗುತ್ತಿವೆ. ಗಾಝಾ ಪಟ್ಟಿಯ ಮೇಲೆ ನಡೆಸಿರುವ ದಾಳಿಯಲ್ಲಿ ಈವರೆಗೆ 1,400 ಮಂದಿ ಹತರಾಗಿದ್ದಾರೆ ಎಂದು ಇಸ್ರೇಲ್ ಸೇನಾ ಪಡೆಗಳು ವರದಿ ಮಾಡಿದ್ದರೆ, ಗಾಝಾ ಪಟ್ಟಿಯ ಆಡಳಿತದ ಚುಕ್ಕಾಣಿ ಹಿಡಿದಿರುವ ಹಮಾಸ್, ಈವರೆಗೆ ಕನಿಷ್ಠ 5,791 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರತಿಪಾದಿಸಿದೆ. ಇದರೊಂದಿಗೆ, ಹಿಂಸಾಚಾರದ ಕಾರಣಕ್ಕೆ ಒಂದು ದಶಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.
23 ಲಕ್ಷ ನಾಗರಿಕರಿಗೆ ನೀರು, ಆಹಾರ, ಇಂಧನ ಹಾಗೂ ವಿದ್ಯುಚ್ಛಕ್ತಿ ಸೇರಿದಂತೆ ಅತ್ಯಗತ್ಯ ಸಂಪನ್ಮೂಲಗಳ ಪೂರೈಕೆಯನ್ನು ಇಸ್ರೇಲ್ ಸ್ಥಗಿತಗೊಳಿಸಿರುವ ಬಗ್ಗೆ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡೆಯನ್ನು ಸಾಮೂಹಿಕ ಶಿಕ್ಷೆ ಎಂದು ವ್ಯಾಖ್ಯಾನಿಸಿರುವ ವಿಶ್ವ ಸಂಸ್ಥೆಯು, ಇದರಿಂದ ನಾಗರಿಕರ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಭದ್ರತಾ ಮಂಡಳಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಗುಟೆರಸ್, ನಾಗರಿಕರನ್ನು ರಕ್ಷಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದು, ಈ ಬಿಕ್ಕಟ್ಟು ವಿಸ್ತಾರವಾದ ಪ್ರಾಂತೀಯ ಬಿಕ್ಕಟ್ಟಾಗಿ ಪರಿವರ್ತನೆಗೊಳ್ಳಬಹುದು ಎಂದೂ ಎಚ್ಚರಿಸಿದ್ದಾರೆ. ಈ ಸಂಕೀರ್ಣ ಬಿಕ್ಕಟ್ಟಿನ ಚಾರಿತ್ರಿಕ ಹಿನ್ನೆಲೆಯನ್ನು ಅನುಮೋದಿಸಿದ ಅವರು, “ಫೆಲೆಸ್ತೀನ್ ನಾಗರಿಕರು ಕಳೆದ 56 ವರ್ಷಗಳ ಅತಿಕ್ರಮಣದಿಂದ ಉಸಿರುಗಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ. ಹೀಗಿದ್ದೂ, ಹಮಾಸ್ ದಾಳಿಯು ಭಯಾನಕವಾಗಿದೆ ಎಂದು ಖಂಡಿಸಿರುವ ಅವರು, ಆದರೆ, ಈ ಕೃತ್ಯವು ಫೆಲೆಸ್ತೀನ್ ನಾಗರಿಕರಿಗೆ ಸಾಮೂಹಿಕ ಶಿಕ್ಷೆ ವಿಧಿಸುವುದನ್ನು ಸಮರ್ಥಿಸುವುದಿಲ್ಲ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
“ಹಮಾಸ್ ದಾಳಿಯು ನಿರ್ವಾತದಿಂದ ಸಂಭವಿಸಿಲ್ಲ ಎಂಬುದನ್ನು ಗುರುತಿಸಬೇಕಿರುವುದೂ ಕೂಡಾ ಮುಖ್ಯವಾಗಿದೆ. ಫೆಲೆಸ್ತೀನ್ ನಾಗರಿಕರು 56 ವರ್ಷಗಳ ಅತಿಕ್ರಮಣದಿಂದ ಉಸಿರುಗಟ್ಟಿದಂತಾಗಿದ್ದಾರೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಆದರೆ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಉಪಸ್ಥಿತರಿದ್ದ ವಿಶ್ವ ಸಂಸ್ಥೆಯ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡಾನ್, ಗುಟೆರಸ್ ಅವರ ಭಾಷಣವನ್ನು ಬಲವಾಗಿ ಟೀಕಿಸಿದ್ದಾರೆ. ನಿರ್ಧಿಷ್ಟವಾಗಿ ಹಮಾಸ್ ದಾಳಿಯು ನಿರ್ವಾತದಿಂದ ಸಂಭವಿಸಿಲ್ಲ ಎಂಬ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಟೆರಸ್ ಭಯೋತ್ಪಾದನೆ ಹಾಗೂ ಹತ್ಯೆಯ ಬಗ್ಗೆ ಸಹಾನುಭೂತಿ ತೋರುತ್ತಿದ್ದಾರೆ ಎಂದು ಆರೋಪಿಸಿದ ಎರ್ಡಾನ್, ವಿಶ್ವ ಸಂಸ್ಥೆಯ ಮುಖ್ಯಸ್ಥರ ಗ್ರಹಿಕೆಯ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.