ಗಾಝಾ: ಇಸ್ರೇಲ್ ದಾಳಿಯಲ್ಲಿ 20,000ಕ್ಕೂ ಹೆಚ್ಚು ಫೆಲೆಸ್ತೀನೀಯರ ಸಾವು
ಗಾಝಾ - Photo: PTI
ಗಾಝಾ: ಗಾಝಾದಲ್ಲಿ ಅಕ್ಟೋಬರ್ 7ರ ಬಳಿಕ ಇಸ್ರೇಲ್ ದಾಳಿಯಲ್ಲಿ 20,057 ಫೆಲೆಸ್ತೀನೀಯರು ಹತರಾಗಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ವರದಿ ಮಾಡಿದೆ.
ಶುಕ್ರವಾರ ಬೆಳಗ್ಗಿನವರೆಗಿನ ಕಳೆದ 48 ಗಂಟೆಗಳಲ್ಲಿ ಇಸ್ರೇಲ್ ದಾಳಿಯಲ್ಲಿ 390 ಫೆಲೆಸ್ತೀನೀಯರು ಹತರಾಗಿದ್ದು ಇತರ 734 ಮಂದಿ ಗಾಯಗೊಂಡಿದ್ದಾರೆ. ಜಬಾಲಾದಲ್ಲಿ ಗಾಝಾ ಆರೋಗ್ಯ ಇಲಾಖೆಯ ಪ್ರಧಾನ ನಿರ್ದೇಶಕ ಮುನೀರ್ ಅಲ್-ಬರ್ಷ್ ಅವರ ಸಹೋದರಿಯ ಮನೆಯ ಮೇಲೆ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಅಲ್ಬ್ರೂಷ್ ಅವರ ಪುತ್ರಿ ಮೃತಪಟ್ಟಿದ್ದು ಅಲ್-ಬರ್ಷ್ ಮತ್ತವರ ಕುಟುಂಬದವರು ಗಾಯಗೊಂಡಿದ್ದಾರೆ ಎಂದು ಗಾಝಾ ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಗಾಝಾ ನಗರದ ಶೇಖ್ ರಾದ್ವಾನ್ ಜಿಲ್ಲೆಯ ಮನೆಯೊಂದಕ್ಕೆ ಇಸ್ರೇಲ್ ನಡೆಸಿದ ಬಾಂಬ್ದಾಳಿಯಲ್ಲಿ 9 ಫೆಲೆಸ್ತೀನೀಯರು ಸಾವಿಗೀಡಾಗಿದ್ದಾರೆ. ರಫಾದಲ್ಲಿ ಇಸ್ರೇಲ್ ದಾಳಿಯಲ್ಲಿ 8, ಖಾನ್ ಯೂನಿಸ್ ನಗರದಲ್ಲಿ 6 ಫೆಲೆಸ್ತೀನೀಯರು ಹತರಾಗಿದ್ದಾರೆ ಎಂದು ಫೆಲೆಸ್ತೀನಿಯನ್ ಸುದ್ಧಿಸಂಸ್ಥೆ `ವಫಾ' ವರದಿ ಮಾಡಿದೆ.