ಟೈಮ್ಸ್ನ 100 ಮಂದಿ ಭಾರೀ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಫೆಲೆಸ್ತೀನಿನ ಫೊಟೋ ಜರ್ನಲಿಸ್ಟ್ ಮೊತಾಝ್ ಅಝೈಝ
ಮೊತಾಝ್ ಅಝೈಝ | Photo : images.dawn.com
ನ್ಯೂಯಾರ್ಕ್: ಗಾಝಾ ಮೇಲಿನ ಇಸ್ರೇಲ್ ಯುದ್ಧವನ್ನು ಚಿತ್ರೀಕರಿಸುತ್ತಿರುವ ಖ್ಯಾತ ಫೆಲೆಸ್ತೀನ್ ಫೊಟೋ ಜರ್ನಲಿಸ್ಟ್ ಮೊತಾಝ್ ಅಝೈಝ, ಟೈಮ್ಸ್ ಪ್ರಕಟಿಸಿರುವ ವಿಶ್ವದ ನೂರು ಮಂದಿ ಭಾರೀ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
2024ರ ‘ಐಕಾನ್’ ವಿಭಾಗದಲ್ಲಿ ವಿಶ್ವದ ನೂರು ಪ್ರಭಾವಶಾಲಿ ವ್ಯಕ್ತಿಗಳ ಪೈಕಿ ಮೊತಾಝ್ ಕೂಡಾ ಒಬ್ಬರು ಎಂದು ಟೈಮ್ಸ್ ನಿಯತಕಾಲಿಕ ಗುರುತಿಸಿದೆ.
“ಕಳೆದ 108 ದಿನಗಳಿಂದ ‘PRESS’ ಎಂಬ ಗುರುತಿರುವ ಫ್ಲಾಕ್ ಜಾಕೆಟ್ ಹಾಗೂ ಕ್ಯಾಮೆರಾ ಸಜ್ಜಿತವಾಗಿರುವ ಮೊತಾಝ್, ತಮ್ಮ ತವರಾದ ಗಾಝಾದಲ್ಲಿ ವಿಶ್ವದ ಕಣ್ಣು ಮತ್ತು ಕಿವಿಯಾಗಿದ್ದಾರೆ” ಎಂದು ಟೈಮ್ಸ್ ನಿಯತಕಾಲಿಕ ಅವರನ್ನು ಬಣ್ಣಿಸಿದೆ.
“25 ವರ್ಷದ ಫೆಲೆಸ್ತೀನ್ ಛಾಯಾಗ್ರಾಹಕ ಸುಮಾರು ನಾಲ್ಕು ತಿಂಗಳನ್ನು ಇಸ್ರೇಲ್ ಬಾಂಬ್ ದಾಳಿಯಿಂದ ಘಾಸಿಗೊಂಡಿರುವ ಮನೆಗಳಿಂದ ನಿರಾಶ್ರಿತರಾಗಿರುವ ಕುಟುಂಬಗಳು, ತಮ್ಮ ಪ್ರೀತಿಪಾತ್ರರಿಗಾಗಿ ರೋದಿಸುತ್ತಿರುವ ಮಹಿಳೆಯರು, ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಪುರುಷರ ಬದುಕಿನ ಕುರಿತು ಚಿತ್ರೀಕರಿಸುವುದರಲ್ಲಿ ಕಳೆದಿದ್ದಾರೆ” ಎಂದು ಟೈಮ್ಸ್ ನಿಯತಕಾಲಿಕ ಪ್ರಶಂಸಿಸಿದೆ.
“ಪ್ರತಿಸ್ಪರ್ಧಿಯಾಗಬಹುದಿದ್ದ ಕೆಲವು ಅಂತರರಾಷ್ಟ್ರೀಯ ಮಾಧ್ಯ ಮಗಳು ಗಾಝಾ ಪಟ್ಟಿಯನ್ನು ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರಿಂದ ಅವರ ಚಿತ್ರಗಳು ಗಾಝಾದ ಕುರಿತು ಒಂದು ನೋಟವನ್ನು ನೀಡಿವೆ. ಅದನ್ನವರು ಭಾರೀ ಅಪಾಯವನ್ನು ಎದುರಿಸಿ ನಿರ್ವಹಿಸಿದ್ದಾರೆ. ಇಸ್ರೇಲ್ – ಫೆಲೆಸ್ತೀನ್ ನಡುವೆ ಅಕ್ಟೋಬರ್ 7ರಿಂದ ನಡೆಯುತ್ತಿರುವ ಯುದ್ದದಲ್ಲಿ ಇಲ್ಲಿಯವರೆಗೆ ಕನಿಷ್ಠ 95 ಮಂದಿ ಪತ್ರಕರ್ತರು ಮೃತಪಟ್ಟಿದ್ದಾರೆ” ಎಂದೂ ಅದು ಹೇಳಿದೆ.
ಗಾಝಾದಿಂದ ಅವರನ್ನು ಸ್ಥಳಾಂತರಗೊಳಿಸಿರುವುದರಿಂದ, ಗಾಝಾ ಬಿಕ್ಕಟ್ಟಿನ ಕುರಿತು ಜಾಗೃತಿ ಮೂಡಿಸುತ್ತಿರುವ ಅಝೈಝ, ಅಂತರರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಆಗ್ರಹಿಸುತ್ತಿದ್ದಾರೆ ಎಂದೂ ಟೈಮ್ಸ್ ನಿಯತಕಾಲಿಕ ಶ್ಲಾಘಿಸಿದೆ.
“ಗಾಝಾದಲ್ಲಿ ಏನಾಗುತ್ತಿದೆ ಎಂಬುದು ನಿಮಗೆ ಸುದ್ದಿಯೇ ಅಲ್ಲ” ಎಂದು ಅಝೈಝ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ನಿಯತಕಾಲಿಕ ವರದಿ ಮಾಡಿದೆ. “ನಿಮ್ಮ ಮೆಚ್ಚುಗೆಗಳು ಅಥವಾ ವೀಕ್ಷಣೆಗಳು ಅಥವಾ ಹಂಚಿಕೆಗಳಿಗಾಗಿ ನಾವು ಗಾಝಾದಲ್ಲಿ ಏನಾಗುತ್ತಿದೆ ಎಂದು ಹೇಳುತ್ತಿಲ್ಲ. ನಾವು ನಿಮ್ಮ ಕ್ರಮಕ್ಕಾಗಿ ಕಾಯುತ್ತಿದ್ದೇವೆ. ನಾವು ಈ ಯುದ್ಧವನ್ನು ನಿಲ್ಲಿಸಬೇಕಿದೆ” ಎಂದೂ ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮೊತಾಝ್, “ನಾನು ಎಲ್ಲೇ ಹೋದರೂ ಅಥವಾ ಏನನ್ನೇ ಸಾಧಿಸಿದರೂ, ನಾನು ನನ್ನೊಂದಿಗೆ ನನ್ನ ದೇಶದ ಹೆಸರನ್ನು ಹಂಚಿಕೊಳ್ಳಲು ಪುಣ್ಯವಂತನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
“ಫೆಲೆಸ್ತೀನ್ ಅನ್ನು ಒಂದು ದೇಶವಾಗಿ ಒಪ್ಪಿಕೊಳ್ಳದ ಅಥವಾ ಅದು ನಮ್ಮ ತಾಯ್ನೆಲ ಎಂದು ವಾದಿಸುವವರಿಗೆ ನಾನು ಹೇಳುವುದೆಂದರೆ, ಒಂದಲ್ಲ ಒಂದು ದಿನ ಯಹೂದಿಗಳು ಹಾಗೂ ಅವರ ಅತಿಕ್ರಮಣದಿಂದ ಫೆಲೆಸ್ತೀನ್ ಸ್ವತಂತ್ರವಾಗಲಿದೆ. ಎಲ್ಲರೂ ತಮ್ಮ ಪಾಲಿನ ಕೆಲಸವನ್ನು ಮಾಡಿದ್ದು, ನನ್ನ ಪಾಲಿನ ಕೆಲಸ ಇನ್ನೂ ಪೂರ್ಣಗೊಂಡಿಲ್ಲ” ಎಂದೂ ಅವರು ಹೇಳಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿನ ಪ್ರಭಾವಶಾಲಿಗಳನ್ನು ಗುರುತಿಸಲು 1999ರಿಂದ ಟೈಮ್ಸ್ ನಿಯತಕಾಲಿಕವು ಟೈಮ್ಸ್ ವಾರ್ಷಿಕ 100 ಪಟ್ಟಿಯನ್ನು ಬಿಡುಗಡೆ ಮಾಡುತ್ತಾ ಬರುತ್ತಿದೆ.
ಈ ಬಾರಿಯ ಪಟ್ಟಿಯು ದುವಾ ಲಿಪಾ, ಹಯಾವೊ ಮಿಯಾಝಾಕಿ, ಪ್ಯಾಟ್ರಿಕ್ ಮಹೋಮೆಸ್, ಮ್ಯಾಕ್ಸ್ ವರ್ಸಟಪೆನ್ ಹಾಗೂ ಕತಾರ್ ಪ್ರಧಾನಿ ಮುಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್-ತನಿ ಅವರ ಹೆಸರುಗಳನ್ನು ಒಳಗೊಂಡಿದೆ.
ಸೌಜನ್ಯ: siasat.com