ಉತ್ತರ ಗಾಝಾದಲ್ಲಿ ಇಸ್ರೇಲ್ ನಿಂದ ಭೀಕರ ವಾಯುದಾಳಿ | 34 ಮಂದಿ ಫೆಲೆಸ್ತೀನಿಯರ ಮೃತ್ಯು
PC : aljazeera.com
ದೆಯಿರ್ ಅಲ್-ಬಲಾಹ್ : ಉತ್ತರ ಗಾಝಾದಲ್ಲಿ ಇಸ್ರೇಲ್ ಸೇನೆಯು ನಡೆಸುತ್ತಿರುವ ನರಮೇಧ ಅವ್ಯಾಹತವಾಗಿ ಮುಂದುವರಿದಿದೆ. ಫೆಲೆಸ್ತೀನ್ ನಿರ್ವಸಿತರು ಆಶ್ರಯ ಪಡೆದಿದ್ದ ಐದು ಅಂತಸ್ತುಗಳ ಕಟ್ಟಡವೊಂದರ ಮೇಲೆ ಮಂಗಳವಾರ ನಸುಕಿನಲ್ಲಿ ಇಸ್ರೇಲಿ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚು ಮಂದಿ ಮಹಿಳೆಯರು ಹಾಗೂ ಮಕ್ಕಳೆಂದು ತಿಳಿದು ಬಂದಿದೆ.
ಇಸ್ರೇಲ್ ಸೇನೆಯ ದಾಳಿಯಿಂದ ಗಾಯಗೊಂಡವರಿಂದ ಆಸ್ಪತ್ರೆಯು ತುಂಬಿ ತುಳುಕುತ್ತಿದೆಯೆಂದು ಉತ್ತರ ಗಾಝಾದಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಏಕೈಕ ಆಸ್ಪತ್ರೆಯ ನಿರ್ದೇಶಕ ಡಾ. ಹೊಸ್ಸಾಮ್ ಅಬು ಸಫಿಯಾ ಅವರು ತಿಳಿಸಿದ್ದಾರೆ. ಶುಕ್ರವಾರ ಇಸ್ರೇಲ್ ಸೇನೆ ಈ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು, ಆ ಸಂದರ್ಭ ಅಲ್ಲಿಂದ ಹೊರಹೋಗಲು ನಿರಾಕರಿಸಿದ ಹೊಸ್ಸಾಮ್ ಅವರ 8 ವರ್ಷದ ಪುತ್ರನನ್ನು ಇಸ್ರೇಲಿ ಸೈನಿಕರು ಹತ್ಯೆಗೈದಿದ್ದರು.
ಈ ಮಧ್ಯೆ ಉತ್ತರ ಗಾಝಾ ಆಸ್ಪತ್ರೆಯ ಹಲವಾರು ಆರೋಗ್ಯ ಪಾಲನಾ ಕಾರ್ಯಕರ್ತರು, ರೋಗಿಗಳು ಮತ್ತು ಅಶ್ರಯ ಪಡೆದವರು ಸೇರಿದಂತೆ ನೂರಾರು ಫೆಲೆಸ್ತೀನಿಯರನ್ನು ಇಸ್ರೇಲ್ ಸೇನೆ ಬಂಧಿಸಿರುವುದಾಗಿ ತಿಳಿದುಬಂದಿದೆ.
ಇಸ್ರೇಲ್ ಗಡಿಯ ಸಮೀಪದಲ್ಲಿರುವ ಬೆಯಿಟ್ ಲಾಹಿಯಾದಲ್ಲಿ ಇಸ್ರೇಲ್ ಸೇನೆ ನಡೆಸಿದ ಇನ್ನೊಂದು ದಾಳಿಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆಂದು ಗಾಝಾದ ಆರೋಗ್ಯ ಸಚಿವಾಲಯದ ತುರ್ತು ಸೇವಾ ಘಟಕವು ತಿಳಿಸಿದೆ. ಮೃತರಲ್ಲಿ ಕ್ರಮವಾಗಿ ಐದು ಮತ್ತು ಆರು ಮಕ್ಕಳೊಂದಿಗೆ ಇಬ್ಬರು ತಾಯಂದಿರು ಕೂಡಾ ಸಾವನ್ನಪ್ಪಿದ್ದಾರೆಂದು ಹೇಳಿಕೆ ತಿಳಿಸಿದೆ. ಆದರೆ ಈ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಉತ್ತರ ಗಾಝಾದಲ್ಲಿ ಕೇವಲ 19 ದಿನಗಳ ಅವಧಿಯಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 770ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.