ಗಾಝಾದ ಮೇಲೆ ಮುಂದುವರಿದ ಇಸ್ರೇಲ್ ದಾಳಿ; 47 ಫೆಲೆಸ್ತೀನೀಯರು ಮೃತ್ಯು
PC : aljazeera.com
ಗಾಝಾ: ಗಾಝಾ ಪಟ್ಟಿಯಲ್ಲಿ ಗುರುವಾರ ರಾತ್ರಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮಹಿಳೆಯರು, ಮಕ್ಕಳ ಸಹಿತ 47 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 10ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಫೆಲೆಸ್ತೀನ್ನ `ವಫಾ' ನ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ದೇರ್ ಅಲ್-ಬಾಲಾಹ್, ನುಸೀರಾತ್ ಶಿಬಿರ ಮತ್ತು ಅಲ್-ಝವಾಯ್ದ ಶಿಬಿರಗಳನ್ನು ಗುರಿಯಾಗಿಸಿ ಇಸ್ರೇಲ್ನ ಯುದ್ಧವಿಮಾನಗಳು ಬಾಂಬ್ ದಾಳಿ ನಡೆಸಿವೆ. ದಾಳಿಯಲ್ಲಿ ಆಸ್ಪತ್ರೆಯೊಂದಕ್ಕೆ ಹಾನಿಯಾಗಿದ್ದು ಕಾರ್ಯನಿರ್ವಹಣೆಗೆ ತೊಡಕಾಗಿದೆ. ಕನಿಷ್ಟ 47 ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇಸ್ರೇಲ್ನ ಕ್ರೂರ ವೈಮಾನಿಕ ದಾಳಿಯಿಂದ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ರಕ್ಷಿಸಲು ಎಲ್ಲಾ ಅಂತರಾಷ್ಟ್ರೀಯ ಸಂಘಟನೆಗಳು ಕ್ರಮ ಕೈಗೊಳ್ಳಬೇಕು ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಆಗ್ರಹಿಸಿದೆ.
ಉತ್ತರ ಗಾಝಾ ಪಟ್ಟಿಯ ಆಸ್ಪತ್ರೆಯನ್ನು ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ಮಿಲಿಟರಿ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದು ಹಮಾಸ್ನ ಹಲವು ಸದಸ್ಯರು ಅಲ್ಲಿ ಅಡಗಿದ್ದಾರೆ ಎಂದು ಇಸ್ರೇಲ್ ಸೇನೆ ಆರೋಪಿಸಿದೆ. ಫೆಲೆಸ್ತೀನ್ ಆರೋಗ್ಯ ಇಲಾಖೆ ಮತ್ತು ಹಮಾಸ್ ಆರೋಪವನ್ನು ನಿರಾಕರಿಸಿದೆ.