ʼಇದು ದುಃಖದ ಈದ್ʼ : ಗಾಝಾದಲ್ಲಿ ಧ್ವಂಸಗೊಂಡ ಮಸೀದಿಗಳ ಬಳಿ ನಾಗರಿಕರಿಂದ ಈದ್ ನಮಾಝ್!

Photo credit: AP/Abdel Kareem Hana)
ಗಾಝಾ: ಯುದ್ಧಪೀಡಿತ ಗಾಝಾದಲ್ಲಿ ನಾಗರಿಕರು ರವಿವಾರ ಈದ್ ಉಲ್-ಫಿತ್ರ್ ಪ್ರಾರ್ಥನೆಗಾಗಿ ಧ್ವಂಸಗೊಂಡ ಮಸೀದಿಗಳ ಬಳಿ ಸೇರಿದರು. ಯುದ್ಧ ಅವಶೇಷಗಳು ಮತ್ತು ಧ್ವಂಸಗೊಂಡ ಕಟ್ಟಡಗಳ ಮಧ್ಯೆ ಈದ್ ನಮಾಝ್ ನಿರ್ವಹಿಸಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕರು ಇಸ್ರೇಲ್ ದಾಳಿಯಲ್ಲಿ ಮಡಿದ ತಮ್ಮ ಪ್ರೀತಿಪಾತ್ರರ ಸಮಾಧಿಗಳಿಗೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸಿದರು.
ʼಇದು ದುಃಖದ ಈದ್ʼ ಎಂದು ಕೇಂದ್ರ ಪಟ್ಟಣ ದೀರ್ ಎಲ್-ಬಾಲಾಹ್ನಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿದ ಆದಿಲ್ ಅಲ್-ಶೇರ್ ಹೇಳಿದರು. ʼನಾವು ನಮ್ಮ ಪ್ರೀತಿಪಾತ್ರರನ್ನು, ನಮ್ಮ ಮಕ್ಕಳು, ನಮ್ಮ ಜೀವನ ಮತ್ತು ನಮ್ಮ ಭವಿಷ್ಯವನ್ನು ಕಳೆದುಕೊಂಡಿದ್ದೇವೆ. ನಾವು ನಮ್ಮ ವಿದ್ಯಾರ್ಥಿಗಳು, ನಮ್ಮ ಶಾಲೆಗಳು, ಸಂಸ್ಥೆಗಳು ಸೇರಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇಸ್ರೇಲ್ ದಾಳಿಯಲ್ಲಿ ನನ್ನ ಕುಟುಂಬದ 20 ಸದಸ್ಯರು ಮೃತಪಟ್ಟಿದ್ದಾರೆʼ ಎಂದು ನೋವಿನಿಂದ ಹೇಳಿದರು.
ಇಸ್ರೇಲ್ ಹಮಾಸ್ನೊಂದಿಗೆ ಕದನ ವಿರಾಮವನ್ನು ಕೊನೆಗೊಳಿಸಿ ಈ ತಿಂಗಳ ಆರಂಭದಲ್ಲಿ ಮತ್ತೆ ದಾಳಿ ಆರಂಭಿಸಿದೆ. ದಾಳಿಯಲ್ಲಿ ನೂರಾರು ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಯಾವುದೇ ಆಹಾರ, ಇಂಧನ ಅಥವಾ ಮಾನವೀಯ ನೆರವು ಗಾಝಾಕ್ಕೆ ರವಾನೆಯಾಗದಂತೆ ತಡೆಯೊಡ್ಡಿತು.
ʼಇಲ್ಲಿ ಹತ್ಯೆ, ಸ್ಥಳಾಂತರ, ಹಸಿವು ಮತ್ತು ಯುದ್ಧ ಮುಂದುವರಿದಿದೆ. ನಾವು ಮಕ್ಕಳನ್ನು ಸಂತೋಷಪಡಿಸುವ ದೃಷ್ಟಿಯಿಂದ ಈದ್ ಪ್ರಾರ್ಥನೆಗಳನ್ನು ನೆರವೇರಿಸಲು ಹೋಗುತ್ತೇವೆ, ಸಂತೋಷಕ್ಕಾಗಿ ಅಲ್ಲ, ನಮಗೆ ಈದ್ ಇಲ್ಲʼ ಎಂದು ಸಯದ್ ಅಲ್-ಕೌರ್ದ್ ಹೇಳಿದರು.
2023ರ ಅಕ್ಟೋಬರ್ 7ರಂದು ಇಸ್ರೇಲ್ ಗಾಝಾ ಮೇಲೆ ದಾಳಿಯನ್ನು ಪ್ರಾರಂಭಿಸಿದೆ. ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ ದಾಳಿಗೆ ಮಕ್ಕಳು, ಮಹಿಳೆಯರು ಸೇರಿ 50,000 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಇಸ್ರೇಲ್ ಬಾಂಬ್ ದಾಳಿಯಿಂದ ಗಾಝಾದ ವಿಶಾಲ ಭೂಪ್ರದೇಶಗಳು, ಕಟ್ಟಡಗಳು, ಆಸ್ಪತ್ರೆಗಳು, ಸಂಸ್ಥೆಗಳು ನಾಶವಾಗಿವೆ. ಗಾಝಾ ಪಟ್ಟಿಯಿಂದ 90% ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಜನರು ನಿರಾಶ್ರಿತ ಶಿಬಿರಗಳಲ್ಲಿ ಭಯದಿಂದ ದಿನದೂಡುತ್ತಿದ್ದಾರೆ. ಆಹಾರ, ನೀರಿಲ್ಲದೆ ಪರದಾಡುತ್ತಿದ್ದಾರೆ.
ಈ ಮಧ್ಯೆ ಅರಬ್ ದೇಶಗಳು ಕದನ ವಿರಾಮವನ್ನು ಮರಳಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತಿದೆ. ಈಜಿಪ್ಟ್ ಮತ್ತು ಖತರ್ನ ಹೊಸ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಹಮಾಸ್ ಶನಿವಾರ ಹೇಳಿದೆ. ಅಮೆರಿಕದ ಸಮನ್ವಯದಲ್ಲಿ ತನ್ನದೇ ಆದ ಪ್ರಸ್ತಾಪವನ್ನು ಮುಂದಿಟ್ಟಿರುವುದಾಗಿ ಇಸ್ರೇಲ್ ಹೇಳಿದೆ.