ಆರು ತಿಂಗಳೊಳಗೆ ಗಾಝಾ ತೊರೆಯುವಂತೆ ಇಸ್ರೇಲ್ಗೆ ಆಗ್ರಹ: ವಿಶ್ವಸಂಸ್ಥೆಯಲ್ಲಿ ನಿರ್ಣಯ ಪ್ರಸ್ತಾಪಿಸಿದ ಫೆಲೆಸ್ತೀನ್
ಸಾಂದರ್ಭಿಕ ಚಿತ್ರ (PTI)
ವಿಶ್ವಸಂಸ್ಥೆ: ಗಾಝಾ ಮತ್ತು ಪಶ್ಚಿಮದಂಡೆಯಲ್ಲಿ ಇಸ್ರೇಲ್ ತನ್ನ ಕಾನೂನುಬಾಹಿರ ಉಪಸ್ಥಿತಿಯನ್ನು 6 ತಿಂಗಳೊಳಗೆ ಕೊನೆಗೊಳಿಸುವಂತೆ ಆಗ್ರಹಿಸುವ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸುವುದಾಗಿ ಫೆಲೆಸ್ತೀನ್ ಹೇಳಿದೆ.
ಫೆಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ನ ಉಪಸ್ಥಿತಿ ಕಾನೂನು ಬಾಹಿರವಾಗಿರುವುದರಿಂದ ತಕ್ಷಣ ಕೊನೆಗೊಳಿಸಬೇಕು ಎಂದು ಕಳೆದ ಜುಲೈಯಲ್ಲಿ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯದ (ಐಸಿಜೆ) ಹೇಳಿಕೆಯ ಪ್ರಕಾರ ಈ ಪ್ರಸ್ತಾವಿತ ನಿರ್ಣಯ ಮಂಡಿಸುವುದಾಗಿ ಫೆಲೆಸ್ತೀನ್ ಪ್ರತಿನಿಧಿ ಹೇಳಿದ್ದಾರೆ.
57 ವರ್ಷಗಳ ಹಿಂದೆ ವಶಪಡಿಸಿಕೊಂಡ ಭೂ ಪ್ರದೇಶಗಳ ಮೇಲೆ ಇಸ್ರೇಲ್ನ ಆಳ್ವಿಕೆಯನ್ನು ವ್ಯಾಪಕವಾಗಿ ಖಂಡಿಸಿದ್ದ ಐಸಿಜೆ, ಇಸ್ರೇಲ್ಗೆ ಈ ಭೂಪ್ರದೇಶದ ಮೇಲೆ ಸಾರ್ವಭೌಮತ್ವದ ಹಕ್ಕಿಲ್ಲ ಮತ್ತು ಬಲವಂತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸುವ ಅಂತರಾಷ್ಟ್ರೀಯ ಕಾನೂನನ್ನು ಇದು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪುಗಳನ್ನು ಅಂಗೀಕರಿಸಬೇಕು ಮತ್ತು ಕಾರ್ಯಗತಗೊಳಿಸಬೇಕು. ಸಾಮಾನ್ಯ ಸಭೆಯ ನಿರ್ಣಯದ ಬಗ್ಗೆ ವಿಶ್ವಸಂಸ್ಥೆಯ 193 ಸದಸ್ಯ ದೇಶಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ರನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
193 ಸದಸ್ಯರ ಸಾಮಾನ್ಯ ಸಭೆಯು ಪ್ರಸ್ತಾವನೆಯನ್ನು ಅಂಗೀಕರಿಸಿದರೆ, ಕಾನೂನುಬದ್ಧವಾಗಿ ಬದ್ಧವಾಗಿರುವುದಿಲ್ಲ. ಆದರೆ ಅದರ ಬೆಂಬಲದ ಪ್ರಮಾಣವು ಜಾಗತಿಕ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ. 15 ಸದಸ್ಯರ ಭದ್ರತಾ ಮಂಡಳಿಯಂತೆ ಸಾಮಾನ್ಯ ಸಭೆಯಲ್ಲಿ ವೀಟೊ ಚಲಾವಣೆಗೆ ಅವಕಾಶವಿಲ್ಲ. ಸೆಪ್ಟಂಬರ್ 22ರಂದು ಸಾಮಾನ್ಯ ಸಭೆಯಲ್ಲಿ ಜಾಗತಿಕ ಮುಖಂಡರ ವಾರ್ಷಿಕ ಉನ್ನತ ಮಟ್ಟದ ಸಭೆ ಆರಂಭಕ್ಕೂ ಮುನ್ನ ಈ ನಿರ್ಣಯವನ್ನು ಮತಕ್ಕೆ ಹಾಕುವುದು ಫೆಲೆಸ್ತೀನೀಯರ ಉದ್ದೇಶವಾಗಿದೆ.
ಫೆಲೆಸ್ತೀನ್ ಪ್ರದೇಶಗಳಿಂದ ಎಲ್ಲಾ ಮಿಲಿಟರಿ ಪಡೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವ ಮೂಲಕ ಇಸ್ರೇಲ್ ಅಂತರಾಷ್ಟ್ರೀಯ ಕಾನೂನನ್ನು ಅನುಸರಿಸಬೇಕೆಂದು ಪ್ರಸ್ತಾವಿತ ನಿರ್ಣಯವು ಆಗ್ರಹಿಸುತ್ತದೆ. ಜತೆಗೆ ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್ ಪ್ರಜೆಗಳನ್ನು ನೆಲೆಗೊಳಿಸುವ ಚಟುವಟಿಕೆಯನ್ನು ಕೊನೆಗೊಳಿಸಬೇಕು ಮತ್ತು ಪಶ್ಚಿಮದಂಡೆಯಲ್ಲಿ ಇಸ್ರೇಲ್ ನಿರ್ಮಿಸಿರುವ ತಡೆಗೋಡೆಗಳನ್ನು ತೆರವುಗೊಳಿಸಲು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಇಸ್ರೇಲ್ನ ಆಕ್ರಮಣದ ಸಂದರ್ಭ ಸ್ಥಳಾಂತರಗೊಂಡಿರುವ ಎಲ್ಲಾ ಪೆಲೆಸ್ತೀನೀಯರೂ ತಮ್ಮ ಮೂಲ ನಿವಾಸಸ್ಥಾನಕ್ಕೆ ಮರಳಲು ಅವಕಾಶ ನೀಡಬೇಕು ಮತ್ತು ಈ ಪ್ರದೇಶದ ಎಲ್ಲಾ ಜನರಿಗೆ ಆಗಿರುವ ನಷ್ಟಕ್ಕೆ ಇಸ್ರೇಲ್ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಪಶ್ಚಿಮದಂಡೆ ವಿವಾದಿತ ಪ್ರದೇಶವಾಗಿದ್ದು ಅದರ ಭವಿಷ್ಯವನ್ನು ಮಾತುಕತೆಯ ಮೂಲಕ ನಿರ್ಧರಿಸಬೇಕು ಎಂದು ಇಸ್ರೇಲ್ ವಾದಿಸುತ್ತಿದೆ. 2005ರಲ್ಲಿ ಗಾಝಾದಿಂದ ಹಿಂದಕ್ಕೆ ಸರಿದಿದ್ದರೂ 2007ರಲ್ಲಿ ಹಮಾಸ್ ಅಧಿಕಾರಕ್ಕೆ ಬಂದ ಬಳಿಕ ಗಾಝಾದ ಮೇಲೆ ದಿಗ್ಬಂಧನ ವಿಧಿಸಿದೆ. ಪಶ್ಚಿಮದಂಡೆ, ಪೂರ್ವ ಜೆರುಸಲೇಂ ಮತ್ತು ಗಾಝಾ ಪಟ್ಟಿಯನ್ನು 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ವಶಪಡಿಸಿಕೊಂಡಿದೆ. ಈ ಮೂರೂ ಪ್ರದೇಶಗಳೂ ಸ್ವತಂತ್ರ ರಾಷ್ಟ್ರದ ವ್ಯಾಪ್ತಿಯಡಿ ಬರಬೇಕು ಎಂಬುದು ಹಮಾಸ್ ಆಶಯವಾಗಿದೆ. ಈ ಮೂರೂ ಪ್ರದೇಶಗಳನ್ನು ಅಂತರಾಷ್ಟ್ರೀಯ ಸಮುದಾಯವು ಆಕ್ರಮಿತ ಪ್ರದೇಶವೆಂದೇ ಪರಿಗಣಿಸಿದೆ.
ಇಸ್ರೇಲ್ ಖಂಡನೆ:
ಪ್ರಸ್ತಾವಿತ ನಿರ್ಣಯವು `ಭಯೋತ್ಪಾದನೆಗೆ ಪುರಸ್ಕಾರ' ಎಂದು ಬಣ್ಣಿಸಿರುವ ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯನಾನ್, ಇದನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದಾರೆ. `ಒಂದಂತೂ ಸ್ಪಷ್ಟ. ಯಾವುದೂ ಇಸ್ರೇಲ್ ಅನ್ನು ತಡೆಯುವುದಿಲ್ಲ. ಒತ್ತೆಯಾಳುಗಳನ್ನು ಸ್ವದೇಶಕ್ಕೆ ಕರೆತರುವ ಮತ್ತು ಹಮಾಸ್ ಅನ್ನು ತೊಡೆದುಹಾಕುವ ಉದ್ದೇಶದಿಂದ ಇಸ್ರೇಲ್ ಅನ್ನು ತಡೆಯಲು ಸಾಧ್ಯವಿಲ್ಲ' ಎಂದವರು ಹೇಳಿದ್ದಾರೆ.
ಪ್ರಸ್ತಾವಿತ ನಿರ್ಣಯದಲ್ಲಿ `ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಗಾಗಿ ಇಸ್ರೇಲ್ ಅನ್ನು ಹೊಣೆಯಾಗಿಸಬೇಕು. ಫೆಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ನ ಉಪಸ್ಥಿತಿ ಮುಂದುವರಿಯಲು ಕಾರಣವಾದವರ ವಿರುದ್ಧ ನಿರ್ಬಂಧ ಜಾರಿಗೊಳಿಸಬೇಕು ಮತ್ತು ಇಸ್ರೇಲ್ಗೆ ಶಸ್ತ್ರಾಸ್ತ್ರ ಪೂರೈಸಬಾರದು' ಎಂದು ದೇಶಗಳನ್ನು ಆಗ್ರಹಿಸಲಾಗಿದೆ.