ಬಿಆ್ಯಂಡ್ಆರ್ ಯೋಜನೆಯಿಂದ ಪನಾಮಾ ನಿರ್ಗಮನ | ಅಮೆರಿಕದ ದುಷ್ಕೃತ್ಯ ಎಂದು ದೂಷಿಸಿದ ಚೀನಾ

ಸಾಂದರ್ಭಿಕ ಚಿತ್ರ
ಬೀಜಿಂಗ್: ಚೀನಾದ ಮಹಾತ್ವಾಕಾಂಕ್ಷೆಯ `ಬೆಲ್ಟ್ ಮತ್ತು ರಸ್ತೆ ಉಪಕ್ರಮ' (ಬಿಆ್ಯಂಡ್ಆರ್)ದಿಂದ ನಿರ್ಗಮಿಸಲು ಪನಾಮಾ ನಿರ್ಧರಿಸಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚೀನಾ `ಒತ್ತಡ ಮತ್ತು ಬಲಾತ್ಕಾರದಿಂದ ಪನಾಮಾದಲ್ಲಿ ಬಿಆ್ಯಂಡ್ಆರ್ ಯೋಜನೆಯನ್ನು ಹಾಳುಗೆಡವಲು ಅಮೆರಿಕ ಮುಂದಾಗಿದೆ ಎಂದು ದೂಷಿಸಿದೆ.
ಬೀಜಿಂಗ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ `ಪನಾಮಾದ ನಿರ್ಧಾರ ಅತ್ಯಂತ ವಿಷಾದನೀಯವಾಗಿದೆ. ದ್ವಿಪಕ್ಷೀಯ ಸಂಬಂಧದ ಸಮಗ್ರ ಪರಿಸ್ಥಿತಿ ಹಾಗೂ ಎರಡೂ ದೇಶಗಳ ನಡುವಿನ ದೀರ್ಘಾವಧಿಯ ಹಿತಾಸಕ್ತಿಗಳ ಆಧಾರದಲ್ಲಿ ಪನಾಮಾ ಸರಿಯಾದ ನಿರ್ಧಾರ ಕೈಗೊಳ್ಳುವುದಾಗಿ ಮತ್ತು ಬಾಹ್ಯ ಹಸ್ತಕ್ಷೇಪವನ್ನು ನಿವಾರಿಸುವುದಾಗಿ ಆಶಿಸುತ್ತೇವೆ ' ಎಂದಿದ್ದಾರೆ. 150ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡಿರುವ ಬೆಲ್ಟ್ ಮತ್ತು ರಸ್ತೆ ಯೋಜನೆಯಲ್ಲಿ 20ಕ್ಕೂ ಅಧಿಕ ಲ್ಯಾಟಿನ್ ಅಮೆರಿಕ ದೇಶಗಳಿದ್ದು ಯೋಜನೆಯು ಆ ದೇಶಗಳ ಜನರಿಗೆ ಪ್ರಯೋಜನಕಾರಿಯಾಗಿದೆ ಎಂದು ಚೀನಾ ಹೇಳಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರನ್ನು ಭೇಟಿಯಾದ ಬಳಿಕ ಬೆಲ್ಟ್ ಮತ್ತು ರಸ್ತೆ ಉಪಕ್ರಮದಿಂದ ನಿರ್ಗಮಿಸುವ ಪತ್ರವನ್ನು ಅಧಿಕೃತವಾಗಿ ಹಸ್ತಾಂತರಿಸಲಾಗಿದೆ ಎಂದು ಪನಾಮಾದ ಅಧ್ಯಕ್ಷ ಜೋಸ್ ರೌಲ್ ಮುಲಿನೊ ಗುರುವಾರ ಹೇಳಿದ್ದರು. ಆದರೆ ಈ ನಿರ್ಧಾರದ ಹಿಂದೆ ಅಮೆರಿಕದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಚೀನಾ 2017ರಲ್ಲಿ ಬೆಲ್ಟ್ ಮತ್ತು ರಸ್ತೆ ಉಪಕ್ರಮವನ್ನು ಪರಿಚಯಿಸಿದ್ದು 2017ರಲ್ಲಿ ಪನಾಮಾ ಸೇರ್ಪಡೆಗೊಳ್ಳುವುದರೊಂದಿಗೆ ಯೋಜನೆಗೆ ಅಧಿಕೃತವಾಗಿ ಸೇರ್ಪಡೆಗೊಂಡ ಪ್ರಥಮ ಲ್ಯಾಟಿನ್ ಅಮೆರಿಕ ದೇಶವಾಗಿ ಗುರುತಿಸಿಕೊಂಡಿದೆ.