ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪ ಪರಿಶೀಲನಾ ಸಮಿತಿಯ ವ್ಯಾಪ್ತಿಗೆ ಭಾರತವನ್ನು ಸೇರಿಸಲು ನಿರ್ಧಾರ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (PTI)
ಟೊರಂಟೊ: ಕೆನಡಾದಲ್ಲಿ ವಿದೇಶಿ ಹಸ್ತಕೇಪವನ್ನು ಪರಿಶೀಲಿಸುವ ತನಿಖಾ ಆಯೋಗವು ಭಾರತವನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲಿದೆ ಎಂದು ಕೆನಡಾದ ಉನ್ನತ ಮೂಲಗಳು ಹೇಳಿವೆ.
ಕೆನಡಾದಲ್ಲಿನ ಭಾರತೀಯ ಸಮುದಾಯದ ಮೇಲಿನ ವಿದೇಶಿ ಹಸ್ತಕ್ಷೇಪದ ಪರಿಣಾಮವನ್ನು ಅರಿತುಕೊಳ್ಳಲು ತನಿಖಾ ಆಯೋಗಕ್ಕೆ ನೆರವಾಗುವ ಕಾನೂನು ಸಲಹೆಗಾರರ ತಂಡಕ್ಕೆ ಈ ಮಾಹಿತಿ ಒದಗಿಸಲಾಗಿದೆ ಎಂದು ಜಸ್ಟಿಸ್ ಮೇರೀ- ಜೋಸೀ ಹಾಗ್ ನೇತೃತ್ವದ ‘ಫೆಡರಲ್ ಇಲೆಕ್ಟೋರಲ್ ಪ್ರೊಸೆಸಸ್ ಆ್ಯಂಡ್ ಡೆಮೊಕ್ರಾಟಿಕ್ ಇನ್ಸ್ಟಿಟ್ಯೂಷನ್’ನ ಹೇಳಿಕೆ ತಿಳಿಸಿದೆ.
ತನಿಖೆಯ ವ್ಯಾಪ್ತಿಗೆ ‘ಜಸ್ಟಿಸ್ ಫಾರ್ ಆಲ್ ಕೆನಡಾ(ಜೆಎಫ್ಎಸಿ)ಯನ್ನು ಸೇರಿಸಲಾಗಿದೆ. ಇದು ಕೆನಡಾದಲ್ಲಿರುವ ಭಾರತೀಯ ವಲಸಿಗ ಸಮುದಾಯದ ಸಕ್ರಿಯ ಕಾನೂನು ಸಲಹಾ ಸಂಸ್ಥೆಯಾಗಿದೆ. ಭಾರತೀಯ ಮೂಲದವರು ಅನೇಕ ವರ್ಷಗಳಿಂದ ಭಾರತೀಯ ವಿದೇಶಿ ಏಜೆಂಟರಿಂದ ಕಿರುಕುಳ ಹಿಂಸೆ ಮತ್ತು ಪ್ರತೀಕಾರದ ಭಯದಿಂದ ಜೀವನ ಸಾಗಿಸುತ್ತಿರುವುದು ಅವರ ವಾಕ್ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆಯನ್ನು ಸೀಮಿತಗೊಳಿಸಿದೆ ಎಂದು ಜೆಎಫ್ಎಸಿ ಪ್ರತಿಪಾದಿಸಿದೆ.
ಜೆಎಫ್ಎಸಿ ಭಾರತೀಯ ಸಮುದಾಯದ ಸಂಘಟನೆಯಲ್ಲ, ಆದರೆ ಭಾರತೀಯ ಸಮುದಾಯದ ಜತೆ ಕಾರ್ಯನಿರ್ವಹಿಸಿದ ಅನುಭವ ಇರುವುದರಿಂದ ಅದನ್ನು ಸೇರಿಸಿಕೊಳ್ಳಲಾಗಿದೆ. ಜತೆಗೆ, ಚೀನಾ, ರಶ್ಯ ಮತ್ತು ಇರಾನ್ ಸಮುದಾಯದ ಪ್ರತಿನಿಧಿ ಸಂಸ್ಥೆಗಳನ್ನೂ ತನಿಖಾ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.