ಕೆನಡಾ ಪ್ರಧಾನಿ ಕಚೇರಿಯೊಡನೆ ಪನ್ನೂನ್ ಸಂಘಟನೆಯ ಸಂಪರ್ಕ: ವರದಿ
PC : PTI
ನ್ಯೂಯಾರ್ಕ್ : ಅಮೆರಿಕ ಮೂಲದ ಸಂಘಟನೆ `ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಕಚೇರಿಯ ಜತೆ ಸಂಪರ್ಕದಲ್ಲಿರುವುದನ್ನು ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ, ಎಸ್ಎಫ್ಜೆ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ಒಪ್ಪಿಕೊಂಡಿರುವುದಾಗಿ ಕೆನಡಾದ ಸಿಬಿಸಿ ನ್ಯೂಸ್ ವರದಿ ಮಾಡಿದೆ.
ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ನಿಯೋಗದ ಗೂಢಚಾರಿಕೆ ನೆಟ್ವರ್ಕ್ನ ಬಗ್ಗೆ ಟ್ರೂಡೊಗೆ ತಾನು ಮಾಹಿತಿ ನೀಡಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಎಸ್ಎಫ್ಜೆ ಕೆನಡಾ ಪ್ರಧಾನಿಯ ಕಚೇರಿಯ ಜತೆ ಸಂವಹನ ನಡೆಸುತ್ತಿದೆ. ಕೆಲವು ವರ್ಷಗಳಿಂದ ಕೆನಡಾ ಸರಕಾರಕ್ಕೆ ಮಾಹಿತಿ ಒದಗಿಸುತ್ತಿದ್ದೆವು. ಟ್ರೂಡೊ ಅಧಿಕಾರಕ್ಕೆ ಬಂದ ಮೇಲೆ ಧನಾತ್ಮಕ ಬೆಳವಣಿಗೆ ನಡೆದಿದ್ದು ನ್ಯಾಯದೆಡೆಗೆ ಒಂದು ಹೆಜ್ಜೆ ಮುಂದೆ ಸಾಗಲಾಗಿದೆ. ಭಾರತದ ವಿರುದ್ಧದ ಕೆನಡಾದ ಆರೋಪಗಳು ನ್ಯಾಯ, ಕಾನೂನು ಮತ್ತು ರಾಷ್ಟ್ರೀಯ ಭದ್ರತೆಗೆ ಕೆನಡಾ ಸರಕಾರದ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಿವೆ ಎಂದು ಪನ್ನೂನ್ ಹೇಳಿರುವುದಾಗಿ ವರದಿಯಾಗಿದೆ.
ಭಾರತದ ರಾಜತಾಂತ್ರಿಕರನ್ನು ಕೆನಡಾ ಉಚ್ಚಾಟಿಸಿರುವುದು ಕೇವಲ ಆರಂಭ ಮಾತ್ರ. ವ್ಯಾಂಕೋವರ್ ಮತ್ತು ಟೊರಂಟೋದಲ್ಲಿರುವ ಭಾರತದ ಕಾನ್ಸುಲೇಟ್ಗಳನ್ನು ಶಾಶ್ವತವಾಗಿ ಮುಚ್ಚಬೇಕು. ಉಚ್ಛಾಟಿಸಲ್ಪಟ್ಟ ರಾಜತಾಂತ್ರಿಕರ ಸ್ಥಾನದಲ್ಲಿ ಮತ್ತೊಬ್ಬರನ್ನು ಭಾರತ ಕಳುಹಿಸಿದರೆ ಈ ಗೂಢಚಾರಿಕೆ ಜಾಲ ಮತ್ತೆ ಸಕ್ರಿಯವಾಗುತ್ತದೆ. ಇದು ಕೆನಡಾದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದೆ ಎಂದು ಪನ್ನೂನ್ ಆಗ್ರಹಿಸಿದ್ದಾನೆ.