ನಾನು ಗೆಲ್ಲದಿದ್ದರೆ ಜನ ಭೀಕರವಾಗಿ ಸಾಯುತ್ತಾರೆ: ಟ್ರಂಪ್ ಎಚ್ಚರಿಕೆ
ವಂದಾಲಿಯಾ (ಅಮೆರಿಕ): ನವೆಂಬರ್ ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ದೇಶದ ಇತಿಹಾಸದಲ್ಲೇ ಅತ್ಯಂತ ಮಹತ್ವದ್ದು. ಈ ಚುನಾವಣೆಯಲ್ಲಿ ನಾನು ಗೆಲ್ಲದಿದ್ದರೆ ಅಮೆರಿಕದಲ್ಲಿ ಜನ ಭೀಕರವಾಗಿ ಸಾಯುತ್ತಾರೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಓಹಿಯೊದಲ್ಲಿ ಶನಿವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ, ನಾನು ಗೆಲ್ಲದಿದ್ದರೆ ಹಿಂಸಾಕೃತ್ಯಗಳಲ್ಲಿ ಜನ ಸಾಯುವುದು ಖಚಿತ ಎಂದು ಹೇಳಿದರು. ಆದರೆ ಯಾವುದನ್ನು ಉಲ್ಲೇಖಿಸಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕದ ವಾಹನ ಉದ್ಯಮಕ್ಕೆ ಇರುವ ಅಪಾಯದ ಬಗೆಗಿನ ಹೇಳಿಕೆಗಳ ನಡುವೆಯೇ ಟ್ರಂಪ್ ಹೇಳಿಕೆ ಕುತೂಹಲ ಮೂಡಿಸಿದೆ.
"ನವೆಂಬರ್ 15 ಈ ದಿನಾಂಕವನ್ನು ನೆನಪಿಟ್ಟುಕೊಳ್ಳಿ. ಇದು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಲಿದೆ ಎನ್ನುವುದು ನನ್ನ ನಂಬಿಕೆ" ಎಂದು ಟ್ರಂಪ್ ಹೇಳಿದರು. ಪ್ರತಿಸ್ಪರ್ಧಿ ಜೋ ಬೈಡನ್ ಅವರನ್ನು ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ಟೀಕಿಸಿದರು.
ಚೀನಾ ಮೆಕ್ಸಿಕೊದಲ್ಲಿ ಕಾರು ಉತ್ಪಾದಿಸಿ ಅದನ್ನು ಅಮೆರಿಕಕ್ಕೆ ಮಾರಾಟ ಮಾಡುವ ಯೋಜನೆಯನ್ನು ಟೀಕಿಸಿ, ನಾನು ಗೆದ್ದರೆ ಅವರು ಇಲ್ಲಿ ಅದನ್ನು ಮಾರಾಟ ಮಾಡಲು ಸಾಧ್ಯವಾಗದು ಎಂದು ಹೇಳಿದರು.
"ಒಂದು ವೇಳೆ ನಾನು ಗೆಲ್ಲದಿದ್ದರೆ, ಇಡೀ ವ್ಯವಸ್ಥೆಗೇ ಅಪಾಯ ಬರಲಿದೆ. ಅದು ದೇಶಕ್ಕೇ ಸಂಭವಿಸಲಿದೆ" ಎಂದರು. ಈ ತಿಂಗಳ ಆರಂಭದಲ್ಲೇ ಟ್ರಂಪ್ ಹಾಗೂ ಬೈಡನ್ ತಮ್ಮ ಪಕ್ಷಗಳ ಅಭ್ಯರ್ಥಿಗಳಾಗುವುದಕ್ಕೆ ಅಗತ್ಯ ಬೆಂಬಲವನ್ನು ಪಡೆದಿದ್ದು, ಅಮೆರಿಕದ ಇತಿಹಾಸದ ಅತ್ಯಂತ ಸುಧೀರ್ಘ ಪ್ರಚಾರ ಅಭಿಯಾನಕ್ಕೆ ಸಜ್ಜಾಗಿದ್ದಾರೆ.