ತಲಾದಾಯ | ದಕ್ಷಿಣ ಸುಡಾನ್ ವಿಶ್ವದಲ್ಲೇ ಅತ್ಯಂತ ಬಡರಾಷ್ಟ್ರ
ವಿಶ್ವದ 10 ಅತ್ಯಂತ ಬಡರಾಷ್ಟ್ರಗಳ ಪಟ್ಟಿ ಪ್ರಕಟ

PC: X
ವಾಶಿಂಗ್ಟನ್ : ದಕ್ಷಿಣ ಸುಡಾನ್ ಇಡೀ ವಿಶ್ವದಲ್ಲೇ ಅತ್ಯಂತ ಬಡರಾಷ್ಟ್ರ ಎನಿಸಿಕೊಂಡಿದ್ದು, 2024ರಲ್ಲಿ ದೇಶದ ಅಂದಾಜು ತಲಾದಾಯ 455.157 ಡಾಲರ್ ಆಗಿದೆ. 2011ರಲ್ಲಿ ಈ ದೇಶ ಸ್ವತಂತ್ರ ರಾಷ್ಟ್ರವಾಗಿದ್ದು, ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿರುವ ಈ ದೇಶ ವಿಶ್ವದ ಅತ್ಯಂತ ಯುವ ದೇಶ ಎನಿಸಿಕೊಂಡಿತ್ತು. ಐಎಂಎಫ್ನ ಆರ್ಥಿಕ ದೃಷ್ಟಿಕೋನ-2024ರ ಅಂಕಿ ಅಂಶಗಳ ಆಧಾರದಲ್ಲಿ ತಲಾದಾಯ ಮಾನದಂಡದಲ್ಲಿ ವಿಶ್ವದ ಅತ್ಯಂತ 10 ಬಡರಾಷ್ಟ್ರಗಳನ್ನು ಪಟ್ಟಿ ಮಾಡಲಾಗಿದೆ.
ವಾರ್ಷಿಕ 915.879 ಡಾಲರ್ ತಲಾದಾಯ ಹೊಂದಿರುವ ಬುರುಂಡಿ ಎರಡನೇ ಅತ್ಯಂತ ಬಡರಾಷ್ಟ್ರ ಎನಿಸಿದೆ. ಪೂರ್ವ ಆಫ್ರಿಕಾದ ಈ ಪುಟ್ಟ ದೇಶ ಹಲವು ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದು, ಕ್ಷಿಪ್ರ ಜನಸಂಖ್ಯಾ ಪ್ರಗತಿ ಕೂಡಾ ಈ ರಾಷ್ಟ್ರದ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಕೇಂದ್ರ ಆಫ್ರಿಕನ್ ರಿಪಬ್ಲಿಕ್ ಮೂರನೇ ಅತ್ಯಂತ ಬಡರಾಷ್ಟ್ರ. ಐಎಂಎಫ್ನ 2024ರ ಅಂದಾಜಿನ ಪ್ರಕಾರ ದೇಶದ ತಲಾದಾಯ 1122.641 ಡಾಲರ್. ಆಫ್ರಿಕಾ ಖಂಡದ ಕೇಂದ್ರಭಾಗದಲ್ಲಿರುವ ಈ ದೇಶ ಸಮೃದ್ಧ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದರೂ, ಕಠಿಣ ಆರ್ಥಿಕ ಸ್ಥಿತಿಯನ್ನು ಎದುರಿಸುತ್ತಿದೆ.
ಡೆಮಾಕ್ರ್ಟಿಕ್ ರಿಪಬ್ಲಿಕ್ ಆಫ್ ಕಾಂಗೊ (1552.343 ಡಾಲರ್), ನೈಜರ್ (1674.659 ಡಾಲರ್), ಮೊಜಾಂಬಿಕ್ (1648.555 ಡಾಲರ್), ಮಾಳವಿ, ಲೈಬೀರಿಯಾ, ಯೆಮನ್ ನಂತರದ ಸ್ಥಾನಗಳಲ್ಲಿವೆ. ಯೆಮನ್ ನ ತಲಾದಾಯ 2024ರಲ್ಲಿ 1996.475 ಡಾಲರ್ ಎಂದು ಅಂದಾಜಿಸಲಾಗಿದೆ.