ಹಮಾಸ್ ಯುದ್ಧದ 2ನೇ ಹಂತ ಆರಂಭ: ಇಸ್ರೇಲ್ ಘೋಷಣೆ
Photo: PTI
ಟೆಲ್ ಅವೀವ್ : ಗಾಝಾದಲ್ಲಿ ಹಮಾಸ್ ವಿರುದ್ಧ ತಾನು ನಡೆಸುತ್ತಿರುವ ನೆಲದ ಕಾರ್ಯಾಚರಣೆ 2ನೇ ಹಂತವನ್ನು ಪ್ರವೇಶಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
ರಾಜಧಾನಿ ಟೆಲ್ಅವೀವ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ ದೀರ್ಘ ಮತ್ತು ಕಠಿಣ ಸಂಘರ್ಷ ಇದಾಗುವ ನಿರೀಕ್ಷೆಯಿದೆ’ ಎಂದರು. ನಮ್ಮ ಮಿಲಿಟರಿ ಕಾರ್ಯಾಚರಣೆಯ ಉದ್ದೇಶ ಅತ್ಯಂತ ಸ್ಪಷ್ಟವಾಗಿದೆ. ಹಮಾಸ್ನ ಮಿಲಿಟರಿ ಮತ್ತು ಆಡಳಿತ ಸಾಮರ್ಥ್ಯವನ್ನು ನಾಶಮಾಡುವುದು ಮತ್ತು ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡವರನ್ನು ಮರಳಿ ಮನೆಗೆ ಕರೆತರುವುದಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ಗಾಝಾ ಪಟ್ಟಿಯೊಳಗೆ ನಡೆಯುವ ಯುದ್ಧ ಸುದೀರ್ಘ ಮತ್ತು ಕಠಿಣವಾಗಿರಲಿದೆ ಮತ್ತು ನಾವು ಇದಕ್ಕೆ ಸಿದ್ಧವಿದ್ದೇವೆ. ಇದು ನಮ್ಮ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ನಮ್ಮ ತಾಯ್ನಾಡಿನ ರಕ್ಷಣೆಗಾಗಿ ನಾವು ಹೋರಾಡುತ್ತೇವೆ. ನಾವು ಹಿಂದೆ ಸರಿಯುವ ಮಾತೇ ಇಲ್ಲ. ವಾಯು ಮತ್ತು ನೆಲದ ಮೇಲಿನ ದಾಳಿಯ ಮೂಲಕ ಭೂಮಿಯ ಮೇಲಿರುವ ಮತ್ತು ನೆಲದಡಿ ಇರುವ ಶತ್ರುಗಳನ್ನು ನಾಶ ಮಾಡದೆ ಬಿಡುವುದಿಲ್ಲ. ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ’ ಎಂದರು.
ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು:
* ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಸೋಮವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ನಡೆಯುವ ನಿರೀಕ್ಷೆ.
* ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾಕ್ಕೆ ತುರ್ತು ಮಾನವೀಯ ನೆರವನ್ನು ಒದಗಿಸುವ ಪ್ರಾಮುಖ್ಯತೆಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನುವೆಲ್ ಮ್ಯಾಕ್ರನ್ ಒತ್ತಿ ಹೇಳಿದ್ದಾರೆ.
* ಇಸ್ರೇಲ್-ಹಮಾಸ್ ನಡುವಿನ ಯುದ್ಧದಿಂದಾಗಿ ಪಶ್ಚಿಮ ಏಶ್ಯಾದ ಪರಿಸ್ಥಿತಿ ಅಸ್ಥಿರ ಮತ್ತು ಚಿಂತಾಜನಕವಾಗಿದೆ. ಎರಡು ರಾಷ್ಟ್ರ ಸೂತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ ಎಂದು ಲೆಬನಾನ್ ಹೇಳಿದೆ.
* ಅಕ್ಟೋಬರ್ 7ರ ಹಮಾಸ್ ದಾಳಿಯ ಬಗ್ಗೆ ದೇಶದ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡುವಲ್ಲಿ ವಿಫಲವಾಗಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಗುಪ್ತಚರ ದಳದ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.