ಫಿಲಿಪ್ಪೀನ್ಸ್: ಪ್ರವಾಹ, ಭೂಕುಸಿತಕ್ಕೆ ಕನಿಷ್ಠ 24 ಮಂದಿ ಬಲಿ

PC : X \ @VOANews
ಮನಿಲಾ: ಗುರುವಾರ ಈಶಾನ್ಯ ಫಿಲಿಪ್ಪೀನ್ಸ್ ನ ಇಸಾಬೆಲಾ ಪ್ರಾಂತದಲ್ಲಿ ಚಂಡಮಾರುತದಿಂದ ನಿರಂತರ ಮಳೆ, ವ್ಯಾಪಕ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು ಹಲವಾರು ವಾಹನಗಳು ನೆರೆನೀರಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ವರದಿಯಾಗಿದೆ.
ಕೆಲವೆಡೆ ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ಮನೆಯ ಛಾವಣಿಯಲ್ಲಿ ಸಿಕ್ಕಿಬಿದ್ದಿರುವ ಜನರನ್ನು ಮೋಟಾರು ಬೋಟ್ಗಳ ಮೂಲಕ ತೆರವುಗೊಳಿಸಲಾಗಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ಲುಝೋನ್ ದ್ವೀಪದಲ್ಲಿ ಶಾಲೆಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿದೆ. ಇಫುಗಾವೊ ಪರ್ವತ ಪ್ರಾಂತದ ಅಗುನಾಲ್ಡೊ ಪಟ್ಟಣಕ್ಕೆ ಗಂಟೆಗೆ 95 ಕಿ.ಮೀ ವೇಗದ ಗಾಳಿಯ ಜತೆಗೆ ಚಂಡಮಾರುತ ಅಪ್ಪಳಿಸಿದ್ದು ವ್ಯಾಪಕ ನಾಶ-ನಷ್ಟ ಉಂಟಾಗಿದೆ.
ಕ್ವೆಝಾನ್ ಮತ್ತು ಬಿಕೊಲ್ ಪ್ರಾಂತದಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿದ್ದು ಈ ಪ್ರಾಂತದ ಬಹುತೇಕ ಗ್ರಾಮಗಳು ಜಲಾವೃತಗೊಂಡಿದೆ. ಭೂಕುಸಿತ ಮತ್ತು ಮರಗಳು ಉರುಳಿ ಬಿದ್ದು ರಸ್ತೆತಡೆ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮನಿಲಾದ ಆಗ್ನೇಯದ ಬಿಕೊಲ್ ವಲಯದ 6 ಪ್ರಾಂತಗಳಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದರೆ, ನಗಾ ನಗರದಲ್ಲಿ 24 ಗಂಟೆಗಳಲ್ಲಿ 2 ತಿಂಗಳ ಪ್ರಮಾಣದ ಮಳೆ ಸುರಿದಿದೆ. ರಕ್ಷಣಾ ಕಾರ್ಯಕ್ಕೆ ನೆರವಾಗಲು ಸುಮಾರು 1,500 ಪೊಲೀಸರನ್ನು ನಿಯೋಜಿಸಲಾಗಿದೆ. ಚಂಡಮಾರುತದಿಂದ 2 ದಶಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. 75,400 ಗ್ರಾಮಸ್ಥರನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.