ಫಿಲಿಪ್ಪೀನ್ಸ್: ಹೊಂಚುದಾಳಿಯಲ್ಲಿ ಇಬ್ಬರು ಯೋಧರು ಮೃತ್ಯು

PC : hindustantimes.com
ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್ ನಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆಯುತ್ತಿರುವ `ಜೀವನೋಪಾಯ ಯೋಜನೆ'ಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಬಂದೂಕುಧಾರಿಗಳು ನಡೆಸಿದ ಹೊಂಚುದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು ಇತರ 12 ಮಂದಿ ಗಾಯಗೊಂಡಿರುವುದಾಗಿ ಮಿಲಿಟರಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಭದ್ರತೆಗಾಗಿ ನಿಯೋಜಿಸಿದ್ದ ಯೋಧರನ್ನು ಕರೆದೊಯ್ಯುತ್ತಿದ್ದ ಸೇನೆಯ ಟ್ರಕ್ ಮೇಲೆ ಹೊಂಚು ದಾಳಿ ನಡೆಸಿದ್ದು ಟ್ರಕ್ಗೆ ಬೆಂಕಿ ಹಚ್ಚಿದ್ದಾರೆ. ಬಸಿಲಾನ್ ಪ್ರಾಂತ ಸುಮಿಸಿಪ್ ನಗರದಲ್ಲಿ ಬುಧವಾರ ಘಟನೆ ನಡೆದಿದ್ದು ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಬಂದೂಕುಧಾರಿಗಳು ಹತರಾಗಿದ್ದು ಉಳಿದವರು ಪರಾರಿಯಾಗಿದ್ದಾರೆ ಎಂದು ಫಿಲಿಪ್ಪೀನ್ಸ್ ಸೇನೆಯ ಮುಖ್ಯಸ್ಥ ಲೆ|ಜ| ರಾಯ್ ಗಲಿಡೊ ಹೇಳಿದ್ದಾರೆ.
ದಾಳಿಕೋರರಲ್ಲಿ 2014ರಲ್ಲಿ ಸರಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿಹಾಕಿದ್ದ ಸಶಸ್ತ್ರ ಹೋರಾಟಗಾರರ ಗುಂಪು `ಮೊರೊ ಇಸ್ಲಾಮಿಕ್ ಲಿಬರೇಷನ್ ಫ್ರಂಟ್'ನ ಕೆಲವು ಸದಸ್ಯರೂ ಇದ್ದರು ಎಂದು ಮಿಲಿಟರಿ ಹೇಳಿದ್ದು ಇವರ ವಿರುದ್ಧ `ಮೊರೊ ಇಸ್ಲಾಮಿಕ್ ಲಿಬರೇಷನ್ ಫ್ರಂಟ್' ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.