ಚೀನಾದ ದಬ್ಬಾಳಿಕೆಗೆ ಫಿಲಿಫ್ಪೀನ್ಸ್ ಮಣಿಯಲಾರದು : ಫರ್ಡಿನಾಂಡ್ ಮಾರ್ಕೊಸ್
Photo : x/@bongbongmarcos
ಮನಿಲಾ: ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಿ ಪಡೆಗಳು , ಫಿಲಿಪ್ಪೀನ್ಸ್ನ ಯೋಧರನ್ನು ಗಾಯಗೊಳಿಸಿದ ಹಾಗೂ ಅವರ ನೌಕೆಗಳನ್ನು ಹಾನಿಗೊಳಿಸಿದ ಘಟನೆಯನ್ನು ಫಿಲಿಪ್ಫೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೊಸ್ ಗುರುವಾರ ತೀವ್ರವಾಗಿ ಖಂಡಿಸಿದ್ದಾರೆ. ತನ್ನನ್ನು ವೌನವಾಗಿಸಲು ಬೀಜಿಂಗ್ ನಡೆಸುತ್ತಿರುವ ಪ್ರಯತ್ನಗಳಿಗೆ ಫಿಲಿಪ್ಫೀನ್ಸ್ ಮಣಿಯಲಾರದು ಎಂದು ಅವರು ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ನೌಕಾಯಾನಕ್ಕೆ ಸಂಬಂಧಿಸಿದಂತೆ ಚೀನಾ ಹಾಗೂ ಫಿಲಿಪ್ಫೀನ್ಸ್ ನಡುವೆ ದೀರ್ಘ ಸಮಯದಿಂದ ಗಡಿವಿವಾದಗಳು ಹೊಗೆಯಾಡುತ್ತಲೇ ಇವೆ. ಇತ್ತೀಚಿನ ತಿಂಗಳುಗಳಲ್ಲಿ ದಕ್ಷಿಣ ಚೀನಾದ ವಿವಾದಿತ ಅಖಾತ ಪ್ರದೇಶಗಳಲ್ಲಿ ಎರಡೂ ದೇಶಗಳ ಸೇನಾ ನೌಕೆಗಳ ನಡುವೆ ಹಲವು ಬಾರಿ ಸಂಘರ್ಷಗಳು ನಡೆದಿದ್ದವು.
ಶನಿವಾರ ಸ್ಪಾರ್ಟಿ ದ್ವೀಪಸ್ತೋಮ ಪ್ರದೇಶದಲ್ಲಿ ಲಂಗರುಹಾಕಿದ್ದ ಫಿಲಿಪ್ಪೀನ್ಸ್ ನೌಕಾಪಡೆಯ ಹಡಗಿಗೆ ಸೈನಿಕರನ್ನು ರವಾನಿಸಲು ಆಗಮಿಸುತ್ತಿದ್ದ ಫಿಲಿಪ್ಪೀನ್ಸ್ ನೌಕೆಯ ಮೇಲೆ ಚೀನಿ ಪಡೆಗಳು ಸೆಕಂಡ್ ಥಾಮಸ್ ಶೋಲ್ ದ್ವೀಪ ಸಮೀಪ ಆಕ್ರಮಣ ನಡೆಸಿದ್ದವು. ಈ ಘಟನೆಯನ್ನು ಹಿನ್ನೆಲೆಯಲ್ಲಿ ಫಿಲಿಪ್ಫೀನ್ಸ್ ಮನಿಲಾದಲ್ಲಿರುವ, ಚೀನಾ ರಾಯಭಾರಿಯನ್ನು ಕರೆಸಿಕೊಂಡು ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು.
ಚೀನಾದ ತಟರಕ್ಷಣಾ ಪಡೆಗಳು ತನ್ನ ನೌಕೆಯನ್ನು ತಡೆಗಟ್ಟಿದ್ದು, ಜಲಫಿರಂಗಿಯಿಂದ ಅದನ್ನು ಹಾನಿಗೊಳಿಸಿದೆ. ಈ ಘಟನೆಯಲ್ಲಿ ತನ್ನ ಮೂವರು ಸೈನಿಕರಿಗೆ ಗಾಯಗಳಾಗಿವೆ ಎಂದು ಫಿಲಿಪ್ಪೀನ್ಸ್ ತಿಳಿಸಿದೆ.
ಆದರೆ ತನ್ನ ಕೃತ್ಯಗಳನ್ನು ಚೀನಾದ ತಟರಕ್ಷಣಾ ಪಡೆಯು ಸಮರ್ಥಿಸಿಕೊಂಡಿದ್ದು, ಫಿಲಿಪ್ಪೀನ್ಸ್ ನೌಕೆಯು ಚೀನಾದ ಜಲಪ್ರದೇಶದೊಳಗೆ ಬಲವಂತವಾಗಿ ನುಸುಳಲು ಯತ್ನಿಸಿದ್ದ ವಿದೇಶಿ ನೌಕೆಯನ್ನು ಕಾನೂನಾತ್ಮಕವಾಗಿ ತಡೆಗಟ್ಟಿ, ಹೊರದಬ್ಬಿದ್ದಾಗಿ ಅದು ಹೇಳಿದೆ