ಚೀನಾದ ರಾಯಭಾರಿಗೆ ಫಿಲಿಪ್ಪೀನ್ಸ್ ಸಮನ್ಸ್
ಮನಿಲಾ: ದಕ್ಷಿಣ ಚೀನಾ ಸಮುದ್ರದ ದ್ವೀಪದ ಬಳಿ ಫಿಲಿಪ್ಪೀನ್ಸ್‍ನ ಸರಕು ನೌಕೆಯ ಮೇಲೆ ಚೀನಾದ ಕರಾವಳಿ ರಕ್ಷಣಾ ಪಡೆ ನಡೆಸಿದ ಜಲಫಿರಂಗಿ ದಾಳಿಯ ಬಗ್ಗೆ ಚೀನಾ ಸರಕಾರಕ್ಕೆ ಅಧಿಕೃತ ಖಂಡನೆ ಮತ್ತು ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಫಿಲಿಪ್ಪೀನ್ಸ್ ಸರಕಾರ ಸೋಮವಾರ ಹೇಳಿದೆ.
ಫಿಲಿಪ್ಪೀನ್ಸ್ ಗೆ ಚೀನಾದ ರಾಯಭಾರಿಯನ್ನು ಕರೆಸಿಕೊಂಡು ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಫಿಲಿಪ್ಪೀನ್ಸ್ ವಿದೇಶಾಂಗ ಇಲಾಖೆ ಹೇಳಿದೆ. ಇದಕ್ಕೂ ಮುನ್ನ, ಫಿಲಿಪ್ಪೀನ್ಸ್‍ನಲ್ಲಿರುವ ಚೀನಾದ ರಾಯಭಾರಿ ಕಚೇರಿಯೂ ಫಿಲಿಪ್ಪೀನ್ಸ್ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪೀನ್ಸ್ ನೌಕೆಗಳ ಅಕ್ರಮ ಪ್ರವೇಶವನ್ನು ವಿರೋಧಿಸಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರದ ದ್ವೀಪಸಮೂಹದ ಬಳಿಯ ಸೆಕೆಂಡ್ ಥಾಮಸ್ ಶೋಲ್‍ನಲ್ಲಿರುವ ತನ್ನ ನೌಕಾನೆಲೆಗೆ ಅಗತ್ಯದ ವಸ್ತುಗಳನ್ನು ಮತ್ತು ತುಕಡಿಗಳನ್ನು ಸಾಗಿಸುತ್ತಿದ್ದ ಉನೈಝಾ 4 ಹಡಗಿನ ಮೇಲೆ ವಿವಾದಾತ್ಮಕ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾದ ಕರಾವಳಿ ರಕ್ಷಣಾ ಪಡೆ ಜಲಫಿರಂಗಿ ದಾಳಿ ನಡೆಸಿದ್ದು ನೌಕಾಪಡೆಯ ಮೂವರು ಸಿಬಂದಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯನ್ನು ಖಂಡಿಸಿರುವ ಅಮೆರಿಕ, ದಕ್ಷಿಣ ಚೀನಾ ಸಮುದ್ರದಲ್ಲಿ ಸಶಸ್ತ್ರ ದಾಳಿಯ ವಿರುದ್ಧ ತನ್ನ ದೀರ್ಘಾವಧಿಯ ಮಿತ್ರ ಫಿಲಿಪ್ಪೀನ್ಸ್ ಅನ್ನು ರಕ್ಷಿಸುವ ಬದ್ಧತೆಯನ್ನು ಪುನರುಚ್ಚರಿಸಿದೆ.