ವಿಮಾನದ ಶೌಚಾಲಯದಲ್ಲಿ ಕುಸಿದು ಬಿದ್ದು ಪೈಲಟ್ ಮೃತ್ಯು: 271 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ
ಸಾಂದರ್ಭಿಕ ಚಿತ್ರ
ಮಿಯಾಮಿ (ಅಮೆರಿಕಾ): 271 ಪ್ರಯಾಣಿಕರನ್ನು ಹೊತ್ತುಕೊಂಡು ಮಿಯಾಮಿಯಿಂದ ಚಿಲಿಗೆ ತೆರಳುತ್ತಿದ್ದ ವಾಣಿಜ್ಯ ವಿಮಾನದ ಪೈಲಟ್ ಕುಸಿದು ಬಿದ್ದು ಮೃತಪಟ್ಟಿದ್ದರಿಂದ ರವಿವಾರ ರಾತ್ರಿ ಪನಾಮಾದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಸ್ಯಾಂಟಿಯಾಗೊಗೆ ತೆರಳಬೇಕಿದ್ದ ಲತಾಮ್ ಏರ್ ಲೈನ್ಸ್ ವಿಮಾನದ ಕಮಾಂಡರ್ ಆಗಿದ್ದ ಐವಾನ್ ಆ್ಯಂಡೌರ್ (56), ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ಹೃದಯ ಸ್ತಂಭನಕ್ಕೀಡಾದರು ಎಂದು Sun ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಮಾನದ ಸಹ ಪೈಲಟ್ ಗಳು ಪನಾಮಾ ನಗರದ ಟೊಕ್ಯುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನವು ಭೂಸ್ಪರ್ಶ ಮಾಡುವಾಗ ವಿಮಾನದ ಪ್ರಯಾಣಿಕರ ಪೈಕಿ ಇಸಡೋರಾ ಎಂಬ ಶುಶ್ರೂಷಕಿ ಇಬ್ಬರು ವೈದ್ಯರೊಂದಿಗೆ ಪೈಲಟ್ ಗೆ ಚಿಕಿತ್ಸೆ ನೀಡಲು ಧಾವಿಸಿದ್ದಾರೆ. ವಿಮಾನವು ಪನಾಮಾ ನಗರದಲ್ಲಿ ಭೂಸ್ಪರ್ಶ ಮಾಡಿದ ನಂತರ ಪೈಲಟ್ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಯಿತು.
ಯಾರಾದರೂ ವೈದ್ಯರು ವಿಮಾನದಲ್ಲಿದ್ದೀರಿಯೇ ಎಂದು ಸಹ ಪೈಲಟ್ ಒಬ್ಬರು ಮನವಿ ಮಾಡಿದರು. ಆ್ಯಂಡೌರ್ ದೇಹ ಸ್ಥಿತಿ ಕ್ಷೀಣಿಸತೊಡಗಿದಂತೆ, ಪರಿಸ್ಥಿತಿಯ ಗಂಭೀರತೆಯನ್ನು ಗಮನಕ್ಕೆ ತೆಗೆದುಕೊಂಡು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಪ್ರಯಾಣಿಕರೊಬ್ಬರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪನಾಮಾ ನಗರದ ಹೋಟೆಲ್ ಗಳಲ್ಲಿ ಪ್ರಯಾಣಿಕರಿಗೆ ವಸತಿ ಸೌಲಭ್ಯ ಒದಗಿಸಲಾಗಿದ್ದು, ವಿಮಾನದ ಕಾರ್ಯಾಚರಣೆಯು ಮಂಗಳವಾರ ಪುನಾರಂಭಗೊಂಡಿತು.
ಲತಾಮ್ ಏರ್ ಲೈನ್ಸ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.