ಅಮೆರಿಕ | ಅಲಾಸ್ಕಾ ಸಮುದ್ರದಲ್ಲಿ ನಾಪತ್ತೆಯಾಗಿದ್ದ ವಿಮಾನದ ಅವಶೇಷ ಪತ್ತೆ: ಎಲ್ಲ 10 ಪ್ರಯಾಣಿಕರು ಮೃತ್ಯು

Photo credit: AP
ಅಲಾಸ್ಕಾ: ಗುರುವಾರ ಅಲಾಸ್ಕಾದ ನೋಮ್ ಬಳಿ ನಾಪತ್ತೆಯಾಗಿದ್ದ ಪ್ರಯಾಣಿಕರ ವಿಮಾನವು ಪಶ್ಚಿಮ ಅಲಾಸ್ಕಾದಲ್ಲಿ ಪತನಗೊಂಡಿದ್ದು, ಶುಕ್ರವಾರ ಅಲಾಸ್ಕಾ ಸಮುದ್ರದ ಹಿಮಗಡ್ಡೆಯಲ್ಲಿ ವಿಮಾನವನ್ನು ಪತ್ತೆ ಹಚ್ಚಲಾಗಿದೆ. ವಿಮಾನದಲ್ಲಿ ತೆರಳುತ್ತಿದ್ದ ಎಲ್ಲ 10 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಪ್ರಾಧಿಕಾರಗಳು ತಿಳಿಸಿವೆ. ಕಳೆದ 25 ವರ್ಷಗಳಲ್ಲಿ ಅಮೆರಿಕದಲ್ಲಿ ಸಂಭವಿಸಿರುವ ಅತ್ಯಂತ ಭೀಕರ ವಿಮಾನ ಅಪಘಾತ ಇದಾಗಿದೆ ಎಂದು ಹೇಳಲಾಗಿದೆ.
ರಕ್ಷಣಾ ಪಡೆಯ ಸಿಬ್ಬಂದಿಗಳು ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯವನ್ನು ನಡೆಸುತ್ತಿದ್ದಾಗ, ವಿಮಾನದ ಅವಶೇಷಗಳು ಕಂಡು ಬಂದವು ಎಂದು ಅಮೆರಿಕ ಕರಾವಳಿ ಪಡೆಯ ವಕ್ತಾರ ಮೈಕ್ ಸಲೆರ್ನೊ ಹೇಳಿದ್ದಾರೆ. ಕೂಡಲೇ ಇಬ್ಬರು ಈಜುಗಾರರನ್ನು ಸಮುದ್ರಕ್ಕಿಳಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
“ಈ ನಷ್ಟವನ್ನು ಸ್ವೀಕರಿಸಲು ತುಂಬಾ ಕಷ್ಟವಾಗುತ್ತಿದೆ” ಎಂದು ಶುಕ್ರವಾರ ಸಂಜೆ ನಡೆದ ಸುದ್ದಿ ಗೋಷ್ಠಿಯಲ್ಲಿ ಅಮೆರಿಕದ ಸೆನೆಟರ್ ಲೀಸಾ ಮುರ್ಕೋವ್ ಸ್ಕಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ದುರಂತದ ಸುದ್ದಿಯಿಂದ ಗದ್ಗದಿತರಾಗಿದ್ದ ನೋಮ್ ಮೇಯರ್ ಜಾನ್ ಹ್ಯಾಂಡೆಲ್ಯಾಂಡ್, ಅಪಘಾತದಲ್ಲಿ ಸಂಭವಿಸಿದ ಮೃತ್ಯುಗಳು ಹಾಗೂ ರಕ್ಷಣಾ ಪ್ರಯತ್ನದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಎಂದು ವರದಿಯಾಗಿದೆ.