ಪಾಕ್ ಸರ್ಕಾರ ರಚನೆಗೆ ಪಿಎಂಎಲ್- ಪಿಪಿಪಿ ಕೂಟ ಸಜ್ಜು
Photo: twitter.com/LoksattaLive
ಹೊಸದಿಲ್ಲಿ: ಅತಂತ್ರ ಸಂಸತ್ ಸೃಷ್ಟಿಯಾಗಿರುವ ಪಾಕಿಸ್ತಾನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಹಲವು ದಿನಗಳ ಸಂಧಾನ ಮಾತುಕತೆ ಬಳಿಕ ಅಂತಿಮ ಒಪ್ಪಂದಕ್ಕೆ ಬಂದಿದ್ದು, ಪಾಕಿಸ್ತಾನದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚನೆಗೆ ವೇದಿಕೆ ಸಜ್ಜಾಗಿದೆ.
ಶೆಹಬಾಝ್ ಷರೀಫ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೊ- ಝರ್ದಾರಿ ಘೋಷಿಸಿದ್ದಾರೆ. ಪಿಪಿಪಿ ಸಹ ಅಧ್ಯಕ್ಷ ಆಸೀಫ್ ಝರ್ದಾರಿ ಅವರನ್ನು ದೇಶದ ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಮಂಗಳವಾರ ತಡರಾತ್ರಿ ಈ ಸಂಬಂಧ ಉಭಯ ಮುಖಂಡರು ಜಂಟಿ ಹೇಳಿಕೆ ನೀಡಿದ್ದಾರೆ.
"ಪಿಪಿಪಿ ಮತ್ತು ಪಿಎಂಎಲ್-ಎನ್ ಅಗತ್ಯ ಸಂಖ್ಯೆಯನ್ನು ಹೊಂದಿವೆ ಹಾಗೂ ಇದೀಗ ನಾವು ಸರ್ಕಾರ ರಚಿಸುವ ಸ್ಥಿತಿಯಲ್ಲಿದ್ದೇವೆ" ಎಂದು ಭುಟ್ಟೊ-ಝರ್ದಾರಿ ಹೇಳಿದ್ದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಪಕ್ಷದಿಂದ ಬೆಂಬಲಿತ ಅಭ್ಯರ್ಥಿಗಳು ಮತ್ತು ಸುನ್ನಿ- ಇತ್ತಿಹಾದ್ ಕೌನ್ಸಿಲ್ ಮೈತ್ರಿಕೂಟ ಸರಳ ಬಹುಮತವನ್ನು ಪಡೆಯಲು ವಿಫಲವಾದ ಬಳಿಕ ಸಮ್ಮಿಶ್ರ ಸರ್ಕಾರ ರಚಿಸುವ ಒಪ್ಪಂದಕ್ಕೆ ಉಭಯ ಪಕ್ಷಗಳು ಬಂದಿವೆ. ಸಂಧಾನ ಮಾತುಕತೆ ಧನಾತ್ಮಕವಾಗಿ ಕೊನೆಗೊಳ್ಳಲು ಕಾರಣರಾದ ಉಭಯ ಪಕ್ಷಗಳ ಮುಖಂಡರನ್ನು ಶೆಹಬಾಝ್ ಷರೀಫ್ ಅಭಿನಂದಿಸಿದ್ದಾರೆ. ಉಭಯ ಪಕ್ಷಗಳ ಒಗ್ಗಟ್ಟಿನಿಂದಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.