ಉಕ್ರೇನ್ ಅಧ್ಯಕ್ಷರ ಹತ್ಯೆಗೆ ಸಂಚು : ಪೋಲ್ಯಾಂಡಿನಲ್ಲಿ ಶಂಕಿತನ ಬಂಧನ
PC : PTI
ವಾರ್ಸಾ: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹತ್ಯೆಗೆ ರಶ್ಯದ ಗುಪ್ತಚರ ಇಲಾಖೆಯೊಂದಿಗೆ ಷಡ್ಯಂತ್ರ ರಚಿಸಿದ ಶಂಕಿತ ಆರೋಪಿಯನ್ನು ಪೋಲ್ಯಾಂಡ್ನಲ್ಲಿ ಬಂಧಿಸಿರುವುದಾಗಿ ಉಕ್ರೇನ್ನ ನ್ಯಾಯಾಂಗ ಇಲಾಖೆ ವರದಿ ಮಾಡಿದೆ.
ಪೋಲ್ಯಾಂಡ್ ಮೂಲದ ಆರೋಪಿಯನ್ನು ಪಾವೆಲ್ ಕೆ. ಎಂದು ಗುರುತಿಸಲಾಗಿದೆ. ಈತ ರಶ್ಯ ಸೇನೆಯ ಗುಪ್ತಚರ ಇಲಾಖೆಗೆ ಮಾಹಿತಿ ರವಾನಿಸುತ್ತಿದ್ದ ಹಾಗೂ ಝೆಲೆನ್ಸ್ಕಿಯ ಸಂಭಾವ್ಯ ಹತ್ಯೆ ಪ್ರಯತ್ನವನ್ನು ಯೋಜಿಸಲು ರಶ್ಯದ ವಿಶೇಷ ಪಡೆಗಳಿಗೆ ನೆರವಾಗುತ್ತಿದ್ದ ಶಂಕೆಯಿದೆ . ಝೆಲೆನ್ಸ್ಕಿ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಉಕ್ರೇನ್ನ ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಪೋಲ್ಯಾಂಡ್ ಅಧಿಕಾರಿಗಳು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ರಶ್ಯದ ಗುಪ್ತಚರ ಅಧಿಕಾರಿಗಳ ಸೂಚನೆಯಂತೆ ತಾನು ಕಾರ್ಯನಿರ್ವಹಿಸುತ್ತಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಂದು ವರದಿ ಹೇಳಿದೆ.
ದಕ್ಷಿಣ ಪೋಲ್ಯಾಂಡ್ನ ರೆಸ್ಝೋವ್-ಜಸಿಯೊಂಕ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ರವಾನಿಸುವ ಕೆಲಸವನ್ನು ಆರೋಪಿಗೆ ವಹಿಸಲಾಗಿತ್ತು ಎಂದು ಉಕ್ರೇನ್ನ ಅಧಿಕಾರಿ ಆಂಡ್ರಿಯ್ ಕೊಸ್ತಿನ್ ಹೇಳಿದ್ದಾರೆ. ಝೆಲೆನ್ಸ್ಕಿ ವಿದೇಶದ ಪ್ರವಾಸದ ಸಂದರ್ಭದಲ್ಲಿ ಈ ವಿಮಾನ ನಿಲ್ದಾಣದ ಮೂಲಕ ಹಾದುಹೋಗುತ್ತಾರೆ. ಅಲ್ಲದೆ ಉಕ್ರೇನ್ಗೆ ಆಗಮಿಸುವ ವಿದೇಶಿ ಅಧಿಕಾರಿಗಳು, ವಿದೇಶಿ ನೆರವನ್ನು ತಲುಪಿಸಲು ಈ ವಿಮಾನ ನಿಲ್ದಾಣ ಬಳಕೆಯಾಗುತ್ತದೆ.